ಬೆಂಗಳೂರು : ಕುಡುಕ ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಂದ ಪತ್ನಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12- ಪತ್ನಿಯೇ ಪತಿಯ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿರುವ ಘಟನೆ ಜೆ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಬಿಬಿಎಂಪಿ ಕಸದ ಆಟೋ ಚಾಲಕ ಮೋಹನ್ (41) ಕೊಲೆಯಾದವರು. ಘಟನೆ ಸಂಬಂಧ ಪತ್ನಿ ಪದ್ಮಾ (36) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಾಗಿ ಪದ್ಮಾ ಕೆಲಸ ಮಾಡುತ್ತಿದ್ದು , 16 ವರ್ಷದ ಹಿಂದೆ ಮೋಹನ್ ಅವರನ್ನು ವಿವಾಹವಾಗಿದ್ದು, ಓಬಳೇಶ್ ಕಾಲೋನಿಯ ನಾಲ್ಕನೆ ಕ್ರಾಸ್‍ನಲ್ಲಿ ವಾಸವಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.

ಮೋಹನ್ ಅವರಿಗೆ ಕುಡಿತದ ಚಟವಿತ್ತು. ಈ ಕಾರಣಕ್ಕೆ ಅವರನ್ನು 6 ತಿಂಗಳ ಹಿಂದೆ ಕುಡಿತದ ಚಟ ಬಿಡಿಸುವ ರಿಯಾಬಿಲಿಟೇಷನ್ ಕೇಂದ್ರಕ್ಕೆ ಸೇರಿಸಲಾಗಿತ್ತು. ನಂತರ ಕೆಲ ದಿನಗಳಿಂದ ಮದ್ಯದಿಂದ ದೂರವಿದ್ದ ಮೋಹನ್ ಅವರು ಮತ್ತೆ ಕುಡಿಯಲು ಆರಂಭಿಸಿದ್ದರು.

ನಿನ್ನೆ ಕುಡಿದುಕೊಂಡು ಮನೆಗೆ ಬಂದ ಮೋಹನ್, ಪತ್ನಿ ಜತೆ ಜಗಳವಾಡಿದ್ದಾರೆ. ಆ ಸಂದರ್ಭದಲ್ಲಿ ಮತ್ತೆ ಕುಡಿಯಲು ಹಣ ಕೇಳಿದ್ದಾರೆ. ಆಗ ಪತ್ನಿ ಎಳನೀರು ತರುವಂತೆ ಹೇಳಿದಾಗ ಆ ವಿಚಾರವಾಗಿ ಜಗಳವಾಗಿದೆ. ಅಷ್ಟೇ ಅಲ್ಲದೆ ಇಂದು ಮುಂಜಾನೆ 3.15ರ ಸುಮಾರಿನಲ್ಲಿ ಮತ್ತೆ ಪತ್ನಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಳ್ಳಾಟ, ನೂಕಾಟವಾಗಿದೆ.

ಈ ವೇಳೆ ಕೆಳಗೆ ಬಿದ್ದ ಮೋಹನ್ ಅವರ ಕುತ್ತಿಗೆ ಮೇಲೆ ಪತ್ನಿ ಕಾಲಿಟ್ಟು ತುಳಿದಿದ್ದಾರೆ. ಆಗ ಅಸ್ವಸ್ಥರಾದ ಮೋಹನ್ ಅವರನ್ನು ನೆರೆ ಹೊರೆಯವರ ಸಹಾಯದಿಂದ ಕೆಂಪೇಗೌಡ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ದಂಪತಿ ಜಗಳದ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ಜೆ.ಜೆ.ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪದ್ಮಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin