ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿಗೆ ಒಂದೇ ದಿನ 25 ಮೈಲಿ ಪ್ರದೇಶ ಭಸ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

ಓರೊವಿಲ್ಲೇ (ಅಮೆರಿಕ), ಸೆ.10-ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚಿನ ಭಾರೀ ಸ್ಫೋಟದಿಂದಾಗಿ ಒಂದೇ ದಿನ 25 ಮೈಲಿ ಪ್ರದೇಶ ಬೆಂಕಿಗಾಹುತಿಯಾಗಿದೆ. ಮೊನ್ನೆಯಷ್ಟೇ ದಾಖಲೆ ಪ್ರಮಾಣದ 20 ಲಕ್ಷ ಎಕರೆಗಳಷ್ಟು ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಬಿರುಗಾಳಿಯಿಂದಾಗಿ ಅರಣ್ಯ ಬೆಂಕಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಿದ್ದು, ಲೆಕ್ಕವಿಲ್ಲದಷ್ಟು ಮನೆಗಳು ಸುಟ್ಟು ಕರಕಲಾಗಿವೆ. ಈ ದುರ್ಘಟನೆಯಲ್ಲಿ ಮತ್ತೆ ಸಾವು-ನೋವು ಸಂಭವಿಸಿದ್ದು. ಸಹಸ್ರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಕಾಡಿನ ಬೆಂಕಿಯ ರೌದ್ರಾವತಾರ ಮತ್ತಷ್ಟು ಉಗ್ರ ಸ್ವರೂಪದ ಅಪಾಯ ಇರುವ ಕಾರಣ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಎಲ್ಲ ಎಂಟು ರಾಷ್ಟ್ರೀಯ ಅರಣ್ಯಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ.

ಕ್ಯಾಲಿಫೋರ್ನಿಯಾ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಈ ವರ್ಷ ಕಾಡ್ಗಿಚ್ಚಿನ ರೌದ್ರಾವತಾರ ಅತ್ಯಂತ ಭೀಕರವಾಗಿದ್ದು, ಎರಡು ದಶಲಕ್ಷ ಎಕರೆ ಪ್ರದೇಶ ಸುಟ್ಟು ಭಸ್ಮವಾಗಿರುವುದು ಇದೇ ಮೊದಲು. ಈ ದುರ್ಘಟನೆಯಲ್ಲಿ ಸಾವು-ನೋವು ಮತ್ತು ಕೋಟ್ಯಂತರ ಡಾಲರ್‍ಗಳಷ್ಟು ಭಾರೀ ನಷ್ಟ ಸಂಭವಿಸಿದೆ. ಅರಣ್ಯದಲ್ಲಿ ಜೀವ ಸಂಕುಲಗಳು ಮತ್ತು ಅಪರೂಪದ ಸಸ್ಯ ವರ್ಗಗಳು ಸುಟ್ಟು ಹೋಗಿವೆ.

ಅರಣ್ಯ ಬೆಂಕಿನ ಕೆನ್ನಾಲಿಗೆಯನ್ನು ಶಮನಗೊಳಿಸಲು ಸುಮಾರು 16,000 ಅಗ್ನಿಶಾಮಕ ಸಿಬ್ಬಂದಿ ಕೆಲವು ದಿನಗಳಿಂದ ಶ್ರಮಿಸುತ್ತಿದ್ಧಾರೆ. ಅಗ್ನಿ ಪ್ರಕೋಪವನ್ನು ತಣಿಸಲು ಹೆಲಿಕಾಪ್ಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.  ಕಾಡ್ಗಚ್ಚಿನಿಂದ ಈ ರಾಜ್ಯದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಸಹಸ್ರರು ಗ್ರಾಮಗಳು ಮತ್ತು ವಸತಿ ಪ್ರದೇಶಗಳಿಗೆ ಹಾನಿಯಾಗಿವೆ.

Facebook Comments