ಮಹಾರಾಷ್ಟ್ರದ ಹೆಮ್ಮೆಯ ಪುತ್ರನಿಗೆ ಅವಮಾನವಾಗುವುದನ್ನು ಉದ್ದವ್‍ಠಾಕ್ರೆ ಸಹಿಸುವರೇ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಫೆ.6- ಭಾರತ ರತ್ನ ಸಚಿನ್ ತೆಂಡೂಲ್ಕರ್ ವಿರುದ್ಧ ಕಾಂಗ್ರೆಸಿಗರು ನಡೆಸುತ್ತಿರುವ ಪ್ರತಿಭಟನೆಯ ಕುರಿತಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್‍ಠಾಕ್ರೆ ಅವರ ಪ್ರತಿಕ್ರಿಯೆ ಏನು ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತನಾಮರು ಟ್ವಿಟ್ ಮಾಡುತ್ತಿದ್ದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್, ಇದು ಭಾರತದ ಆಂತರಿಕ ವಿಷಯ, ಹೊರಗಿನವರು ತಲೆ ಹಾಕಬಾರದು ಎಂದು ತಿರುಗೇಟು ನೀಡಿದ್ದರು.

73 ದಿನಗಳ ರೈತರ ಪ್ರತಿಭಟನೆ ಬಗ್ಗೆ ಒಮ್ಮೆ ಕೂಡ ಪ್ರತಿಕ್ರಿಯಿಸದ ತೆಂಡೂಲ್ಕರ್ ಅವರು ವಿದೇಶಿ ಖ್ಯಾತ ನಾಮರಿಗೆ ತಿರುಗೇಟು ನೀಡಿರುವುದಕ್ಕೆ ಪರ-ವಿರೋಧ ಚರ್ಚೆಗಳು ನಡೆದಿವೆ.ಕಾಂಗ್ರೆಸ್ ಸಚಿನ್ ತೆಂಡೂಲ್ಕರ್ ವಿರುದ್ಧ ಪಶ್ಚಿಮಬಂಗಾಳ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿ ಸಚಿನ್ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿಯಲಾಗಿದೆ. ಕೆಲವು ಸಂಘಟನೆಗಳು ಕೂಡ ಈ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿವೆ.

ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ನಡೆದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವೀಸ್ ಅವರು, ಭಾರತ ರತ್ನ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರದ ಮಗ. ಅವರು ನಮ್ಮ ನಾಡಿಗಷ್ಟೇ ಅಲ್ಲ ಇಡೀ ದೇಶಕ್ಕೆ ಹೆಮ್ಮೆಯ ವ್ಯಕ್ತಿ. ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಉದ್ದವ್‍ಠಾಕ್ರೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಹಾವಿಕಾಸ್‍ಅಗಡಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಶಿವಸೇನೆ ಮತ್ತು ಎನ್‍ಸಿಪಿ ಪಕ್ಷಗಳು ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿವೆ. ಈಗ ಕಾಂಗ್ರೆಸ್‍ನ ಪ್ರತಿಭಟನೆಗಳು ಮುಖ್ಯಮಂತ್ರಿ ಉದ್ದವ್‍ಠಾಕ್ರೆ ಅವರನ್ನು ಮುಜುಗರಕ್ಕೀಡು ಮಾಡಿವೆ.

Facebook Comments

Sri Raghav

Admin