ಬೈಎಲೆಕ್ಷನ್ ಎಫೆಕ್ಟ್ , 10 ದಿನದ ಚಳಿಗಾಲದ ಅಧಿವೇಶನ 3 ದಿನಕ್ಕೆ ಮೊಟಕು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು-ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದ್ದು, ಅಕ್ಟೋಬರ್‌ 10 ರಿಂದ 12 ವರೆಗೆ ನಿಗದಿಪಡಿಸಲಾಗಿದೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮೂರು ದಿನ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಜೆ ಸಿ ಮಾಧುಸ್ವಾಮಿ, 15 ಕ್ಷೇತ್ರಗಳಲ್ಲಿ ಉಪಚುನಾವಣೆ ಇರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. 15 ತಾಲ್ಲೂಕುಗಳಲ್ಲಿ ಅಭಿವೃದ್ಧಿ ಕಾರ್ಯ, ಹೊಸ ಯೋಜನೆ ಘೋಷಿಸುವಂತೆ ಇಲ್ಲ. ನೆರೆ, ಬರ ಸಂಬಂಧಿ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ‌ಹತ್ತು ದಿನಗಳ ಬದಲಿಗೆ ಮೂರು ದಿನ ಅಧಿವೇಶನ ನಡೆಸಲಾಗುತ್ತಿದೆ. ಅಧಿವೇಶನದಲ್ಲಿ ಪೂರಕ ಬಜೆಟ್​ಗೆ ಮಾತ್ರ ಅನುಮೋದನೆ ನೀಡಲಾಗುವುದು. ಉಳಿದಂತೆ ಯಾವುದೇ ಘೋಷಣೆ ಇಲ್ಲ ಎಂದು ತಿಳಿಸಿದರು.

ಈ ಹಿಂದೆ ಅ.14 ರಿಂದ 10 ದಿನ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಉಪ ಚುನಾವಣೆ ಘೋಷಣೆಯಾಗಿ ನೀರಿ ಸಂಹಿತೆ ಜಾರಿಯಲ್ಲಿರುವುದರಿಂದ ಅ.10 ರಿಂದ 12 ರವರೆಗೆ ಮೂರು ದಿನಕ್ಕೆ ಸೀಮಿತಗೊಳಿಸಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಬಜೆಟ್‌ ಅನುಮೋದನೆಗೆ ಸೀಮಿತವಾಗಿ ಅಧಿವೇಶನ ನಡೆಯಲಿದೆ. ಪೂರಕ ಬಜೆಟ್‌ ಮಂಡಿಸಲಾಗುವುದು. ಪೂರ್ಣ ಪ್ರಮಾಣದ ಬಜೆಟ್‌ಗೆ ಅನುಮೋದನೆ ಸಿಗದಿದ್ದರೆ ಲೇಖಾನುದಾನ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

15 ಕ್ಷೇತ್ರಗಳಲ್ಲಿ ಉಪಚುನಾವಣೆ ಇರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. 15 ತಾಲ್ಲೂಕುಗಳಲ್ಲಿ ಅಭಿವೃದ್ಧಿ ಕಾರ್ಯ, ಹೊಸ ಯೋಜನೆ ಘೋಷಿಸುವಂತೆ ಇಲ್ಲ. ನೆರೆ, ಬರ ಸಂಬಂಧಿ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಅದಕ್ಕಾಗಿ ಒಟ್ಟು 50 ಕೋಟಿ ರೂ ನಿಗದಿ ಮಾಡಲಾಗಿದೆ.

ಇಂದಿನ ಸಭೆಯಲ್ಲಿ 20 ಕೋಟಿ ರೂ ಬಿಡುಗಡೆಗೆ ನಿರ್ಧಾರ ಮಾಡಲಾಗಿದೆ ಹಾಗೆಯೇ ಮಂಗನ‌ ಕಾಯಿಲೆ ಪತ್ತೆಗೆ ಶಿವಮೊಗ್ಗದಲ್ಲಿ ಪ್ರತ್ಯೇಕ ಡಯಾಗ್ನೋಸ್ಟಿಕ್ ಕೇಂದ್ರ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಶಿವಮೊಗ್ಗ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಂಗನ ಕಾಯಿಲೆ ಸಮಸ್ಯೆ ತೀವ್ರವಾಗಿದ್ದು, ಕಾಯಿಲೆ ಸಂಬಂಧ ಅಧ್ಯಯನ ನಡೆಸಲು ಶಿವಮೊಗ್ಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟ ಪ್ರದೇಶದ ಭಾಗಗಳಲ್ಲಿ ಮಂಗನ ಕಾಯಿಲೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವುದರಿಂದ ರೋಗ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಮೂರು ವಿಚಾರ ಬಿಟ್ಟು ಯಾವುದೇ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿಲ್ಲ ಎಂದು ತಿಳಿಸಿದರು. ಬರ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

Sri Raghav

Admin