ವಿಧಾನಸೌಧದಲ್ಲಿ ಒಡೆಯರ್ ಫೋಟೋ ಅಳವಡಿಕೆಗೆ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.8- 10ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಫೋಟೋಗಳನ್ನು ವಿಧಾನಸೌಧದಲ್ಲಿ ಅಳವಡಿಸುವ ಬಗ್ಗೆ ನಾನೇ ಖುದ್ದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಮನವಿ ಮಾಡಿದ್ದೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಸಭಾಧ್ಯಕ್ಷರಾದ ಕಾಗೇರಿ ಅವರು ಮನವಿ ಬಗ್ಗೆ ತಕ್ಷಣ ಸ್ಪಂದನೆ ನೀಡಿದ್ದಲ್ಲದೆ, ತಾವೂ ಸಹ ಮೈಸೂರಿನ ಅಭಿವೃದ್ಧಿಗೆ ಇವರ ಕೊಡುಗೆ ಬಗ್ಗೆ ತಿಳಿದಿದ್ದೇನೆ. ಹೀಗಾಗಿ ವಿಧಾನಸೌಧದಲ್ಲಿ ಫೋಟೋ ಅಳವಡಿಸಲು ಕ್ರಮ ವಹಿಸುತ್ತೇನೆ ಎಂದು ಹೇಳಿದ್ದಾಗಿ ಸಚಿವರು ಸುದ್ದಿಗಾರರಿಗೆ ತಿಳಿಸಿದರು.

# ಸಿದ್ದರಾಮಯ್ಯ ವೃಥಾ ಆರೋಪ:
ಮುಖ್ಯಮಂತ್ರಿಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆ. ರಾಜಕಾರಣಿಗಳು ಯಾರು ಬೇಲ್ ನಲ್ಲಿಲ್ಲ ಎಂದ ಸಚಿವರು, ಕೆಲವು ವೈಯುಕ್ತಿಕ ವಿಷಯಗಳಲ್ಲೂ ಪ್ರಕರಣಗಳಿರುತ್ತವೆ. ಅದಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಕೋಟದಲ್ಲಿ ವಿರೋಧ ಪಕ್ಷದವರೇ ಇದ್ದರೆ ಸರ್ಕಾರ ಏನೂ ಮಾಡಿಲ್ಲಎಂದು ಹೇಳುವುದು ವಿರೋಧ ಪಕ್ಷದವರ ಕೆಲಸವಾಗಿದೆ. ಅವರೇ ಡಕೋಟಾದಲ್ಲಿದ್ದಾರೆ. ಸುಮ್ಮನೆ ನಮ್ಮ ಬಗ್ಗೆ ಹೇಳುತ್ತಿದ್ದಾರೆ ಎಂದು ಹೇಳಿದ ಸಚಿವರು, ಅವರೇ ವಿರೋಧ ಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷದವರಾಗಿ ಅವರೇ ಜಿಲ್ಲೆಗಳಿಗೆ ಪ್ರವಾಸಕ್ಕೂ ಹೋಗುತ್ತಿಲ್ಲ. ಅವರು ಪ್ರವಾಸಕ್ಕೆ ಸಹ ಸರ್ಕಾರವೇ ಹಣ ನೀಡುತ್ತದೆ. ಆದರೆ, ಅವರು ಮಾಡುವ ಕೆಲಸ ಮಾಡದೇ ಸುಮ್ಮನೆ ಈ ರೀತಿ ಹೇಳುತ್ತಾರೆ ಎಂದರು.

ವಿರೋಧ ಪಕ್ಷದ ನಾಯಕರು, ಸದಸ್ಯರು ಮಾಡಿದ ಆರೋಪಕ್ಕೆ ನಾನೂ ಸಹಿತ ಎಲ್ಲರೂ ಮಾತನಾಡಿದ್ದೇವೆ. ಸಮರ್ಥವಾಗಿ ಎದುರಿಸಿದ್ದೇವೆ. ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ತಿಳಿಸಿದ್ದೇವೆ. ಮುಖ್ಯಮಂತ್ರಿಗಳು ಮಾತನಾಡಲು ನಿಂತಾಗ ನಾವು ಯಾರೂ ಮಾತನಾಡುವುದಿಲ್ಲ. ಅವರು ನಮ್ಮ ನಾಯಕರು. ಅವರು ಸದನದಲ್ಲಿ ಒಂದೂವರೆ ಗಂಟೆಗಳ ಕಾಲ ಮಾತನಾಡಿ ಸರ್ಕಾರದ ಎಲ್ಲ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಅವರೊಬ್ಬರನ್ನೇ ಏಕಾಂಗಿಯನ್ನಾಗಿ ಬಿಟ್ಟಿದ್ದೇವೆ ಎಂಬುದು ಸುಳ್ಳು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಯಾವುದೇ ಹಂತದಲ್ಲೂ ನಿಂತಿಲ್ಲ. ಮುಖ್ಯಮಂತ್ರಿಗಳು ಸಹ ಸದನದಲ್ಲಿ ಈ ಬಗ್ಗೆ ವಿವರಣೆಯನ್ನು ಈಗಾಗಲೇ ನೀಡಿದ್ದಾರೆ. ಯಡಿಯೂರಪ್ಪ ಅವರು ಕೋವಿಡ್ ಸಮಯದಲ್ಲಿ 24/7 ಕೆಲಸ ಮಾಡಿದ್ದಾರೆ. ಕೊರೊನಾದಿಂದ ಆರ್ಥಿಕ ಹಿನ್ನಡೆಯಾಗಿ ಅಭಿವೃದ್ದಿ ಕುಂಠಿತವಾಗಿತ್ತು. ಈಗ ಎಲ್ಲವೂ ಸರಿಯಾಗಿದೆ ಎಂದು ವಿವರಿಸಿದರು.

# ರೈತರಿಗೆ 12975.34 ಕೋಟಿ ಸಾಲ:
ಸಹಕಾರ ಇಲಾಖೆ ಮುಖಾಂತರ ರೈತರಿಗೆ ಸಾಲ ನೀಡಿಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಒಟ್ಟಾರೆ 24.50 ಲಕ್ಷ ರೈತರಿಗೆ 15300 ಕೋಟಿ ರೂ. ಸಾಲ ನೀಡುವ ಗುರಿಯಲ್ಲಿ ಈಗಾಗಲೇ 19,99,508 ರೈತರಿಗೆ 12975.34 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

# ಮೇಯರ್ ಹುದ್ದೆಗೆ ಯತ್ನ:
ಮಹಾನಗರ ಪಾಲಿಕೆ ಮೇರ್ಯ ಆಯ್ಕೆ ವಿಷಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇನ್ನೂ ಮೀಸಲಾತಿ ಪ್ರಕಟವಾಗಿಲ್ಲ. ಬುಧವಾರದ ವೇಳೆಗೆ ಮೀಸಲಾತಿ ಪ್ರಕಟವಾಗುವ ಸಾಧ್ಯತೆಗಳಿದ್ದು, ಬಳಿಕ ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಮೇಯರ್ ಹುದ್ದೆ ಬಿಜೆಪಿಗೆ ಸಿಗುವಂತೆ ಮಾಡಲು ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

Facebook Comments