ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಸೆ.14- ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವಿಗೀಡಾದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಲಕ್ಷ್ಮಿ(51) ಸಾವಿಗೀಡಾದ ಮಹಿಳೆ. ನಗರದ ಜೆಸಿಆರ್ ಬಡಾವಣೆಯ 3ನೇ ಕ್ರಾಸ್‍ನಲ್ಲಿ ವಾಸವಿದ್ದ ಲಕ್ಷಿನಿನ್ನೆ ಸಂಜೆ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಜಿಲ್ಲಾಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಹಾಗೂ ಆಕ್ಸಿಜನ್ ಇಲ್ಲದೆ ಮಾಸ್ಕ್ ಹಾಕಿ ಕಾಟಾಚಾರದ ಚಿಕಿತ್ಸೆ ನೀಡಿದ್ದರಿಂದ ರಾತ್ರಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬುದು ಸಂಬಂಧಿಕರ ಆರೋಪವಾಗಿದೆ. ಕಳೆದ ಮಂಗಳವಾರವಷ್ಟೆ ಈಕೆಯ ಪತಿ ಸಾವಿಗೀಡಾಗಿದ್ದರೂ ಅದೇ ಕೊರಗಲ್ಲಿ ಈಕೆಗೆ ನಿನ್ನೆ ಹೃದಯಾಘಾತವಾಗಿದೆ ಎಂಬುದು ಸಂಬಂಧಿಕರಿಂದ ತಿಳಿದುಬಂದಿದೆ.

ಕಳೆದ ಬುಧವಾರವಷ್ಟೇ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಿಸಿದ್ದರು. ಅಲ್ಲದೆ, ರೋಗಿಗಳ ಸಂಬಂಧಿಕರ ಜೊತೆ ನೆಲದಲ್ಲಾ ಕುಳಿತು ಸಮಸ್ಯೆಗಳನ್ನು ಆಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ವೈದ್ಯರು, ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಜೊತೆಗೆ, ಚಿಕಿತ್ಸೆಗೆ ಬೇಕಾದ ಸೂಕ್ತ ಸೌಲಭ್ಯಗಳು ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಇಲ್ಲ.

ಈ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳ ವರ್ಗಾವಣೆ ಆಗುವವರೆಗೂ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

Facebook Comments