ನಿವೃತ್ತ ಯೋಧನ ಪತ್ನಿ ಕೊಲೆ ಪ್ರಕರಣದ ತನಿಖೆ ಚುರುಕು

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಅ.31- ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಿ ಮೈಮೇಲಿದ್ದ ಚಿನ್ನಾಭರಣವನ್ನು ಕದ್ದೊಯ್ದಿರುವ ದುಷ್ಕರ್ಮಿಗಳಿಗಾಗಿ ನೆಲಮಂಗಲ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಾಜರಹಳ್ಳಿ ಗ್ರಾಮದ ಕಾವೇರಿ ಲೇಔಟ್‍ನಲ್ಲಿ ವಾಸವಿರುವ ನಿವೃತ್ತ ಯೋಧ ಶಿವಬಸವಯ್ಯ ಎಂಬುವವರ ಪತ್ನಿ ಶಾರದಮ್ಮ ಅವರನ್ನು ನಿನ್ನೆ ಬೆಳಗ್ಗೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಶೇಷ ತಂಡ ದುಷ್ಕರ್ಮಿಗಳಿಗಾಗಿ ತನಿಖೆ ಚುರುಕುಗೊಳಿಸಿ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳ ಫುಟೇಜ್‍ಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ. ನಿನ್ನೆ ಬೆಳಗ್ಗೆ ಶಿವಬಸವಯ್ಯ ಕೆಲಸಕ್ಕೆ ತೆರಳಿದ ನಂತರ ಇವರ ಮನೆಗೆ ಯಾರು ಬಂದಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಶಾರದಮ್ಮ ಅವರ ಮೊಬೈಲ್‍ನಲ್ಲಿ ಬಂದಿರುವ ಕರೆಗಳನ್ನು ಪರಿಶೀಲಿಸುತ್ತಿದ್ದಾರೆ.

ನಿನ್ನೆ ಬೆಳಗ್ಗೆ 9.30ರ ಸುಮಾರಿನಲ್ಲಿ ಮಗಳು ಮನೆಗೆ ಬಂದಾಗ ಬಾಗಿಲು ತೆರೆದಿಲ್ಲ. ಈ ಸಮಯದಲ್ಲಿ ದುಷ್ಕರ್ಮಿಗಳು ಒಳಗೇ ಇದ್ದರೆ ಎಂಬ ಬಗ್ಗೆಯೂ ಸಹ ಮಾಹಿತಿ ಕಲೆ ಹಾಕುತ್ತಿರುವ ತಂಡ ಮನೆಯ ಮುಂಬಾಗಿಲ ಚಿಲಕವನ್ನು ಒಳಗಿನಿಂದ ಹಾಕಲಾಗಿದೆ. ಬಹುಶಃ ಪರಿಚಿತರೇ ಮನೆಗೆ ಬಂದು ಶಾರದಮ್ಮ ಅವರನ್ನು ಕೊಲೆ ಮಾಡಿ ನಂತರ ಹಿಂಬಾಗಿಲ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆ ಚುರುಕುಗೊಳಿಸಲಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಇವರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣದಲ್ಲಿ ತಮಿಳುನಾಡು ಮೂಲದ ರಾಜನ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದರು.  ಈ ಆರೋಪಿ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಟ್ಟಾರೆ ನೆಲಮಂಗಲದಲ್ಲಿ ಹಾಡಹಗಲೇ ಮನೆಗಳ್ಳತನ, ಕೊಲೆಯಂತಹ ಕೃತ್ಯಗಳು ನಡೆದಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

Facebook Comments