ಅಂತ್ಯಕ್ರಿಯೆಗೆ ಸಿದ್ಧಪಡಿಸುತ್ತಿದ್ದಾಗ ಕಣ್ಣು ಬಿಟ್ಟ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ಈ ಮಹಿಳೆಯ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರೆಲ್ಲ ಅಂತ್ಯಕ್ರಿಯೆಗೆ ಆಗಮಿಸಿದ್ದರು. ಶವವನ್ನು ಕೊಂಡೊಯ್ಯಲು ಸಿದ್ಧತೆ ಕೂಡ ನಡೆಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮಹಿಳೆ ಕಣ್ಣು ಬಿಟ್ಟಳು; ಅಲ್ಲಿ ಬಂದಿದ್ದವರಿಗೆಲ್ಲ ಆಶ್ಚರ್ಯ. ಇದೇನು ಪವಾಡವೋ ದೇವರ ಮಹಿಮೆಯೋ.. ಸತ್ತಿದ್ದಾರೆಂದು ಭಾವಿಸಿದ್ದೆವು. ಆದರೆ, ಈಕೆ ಬದುಕಿದ್ದಾಳೆ ಎಂದು ಎಲ್ಲರಿಗೂ ಪರಮಾಶ್ಚರ್ಯವಾಯಿತು.

ಯಲ್ಲಮ್ಮನ ಪವಾಡ ಎಂದು ಅಲ್ಲಿದ್ದವರೆಲ್ಲ ಉಧೋ ಉಧೋ ಎಂದು ಉದ್ಘಾರ ತೆಗೆದರು. ಇದು ನಡೆದದ್ದು ಬೆಳಗಾವಿ ಜಿಲ್ಲೆ ಮುಚ್ಚಂಡಿ ಎಂಬ ಗ್ರಾಮದಲ್ಲಿ. ಮಾಲು ಎಲ್ಲಪ್ಪ ಚೌಗಲೆ(55) ಎಂಬ ಮಹಿಳೆ ತೀವ್ರ ಮೆದುಳು ಜ್ವರದಿಂದ ಬಳಲುತ್ತಿದ್ದರು. ಇವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದರಿಂದ ಇವರ ಕುಟುಂಬದವರು ಇವನ್ನು ಆ್ಯಂಬ್ಯುಲೆನ್ಸ್‍ನಲ್ಲಿ ಮನೆಗೆ ಕರೆದುಕೊಂಡು ಬರುತ್ತಿದ್ದರು.

ಬರುವಾಗ ಇವರ ಉಸಿರಾಟ ನಿಂತಿದೆ. ಈ ಸಂದರ್ಭದಲ್ಲಿ ಅವರ ಪುತ್ರ ಸಂತೋಷ್ ಗ್ರಾಮಸ್ಥರಿಗೆ ಹಾಗೂ ಸಂಬಂಧಿಕರಿಗೆ ತಾಯಿ ತೀರಿಕೊಂಡಿದ್ದಾಳೆ ಎಂದು ಸುದ್ದಿ ಮುಟ್ಟಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಅವರ ಮನೆ ಮುಂದೆ ನೂರಾರು ಜನ ಜಮಾಯಿಸಿದ್ದಾರೆ.

ಆ್ಯಂಬ್ಯುಲೆನ್ಸ್‍ನಿಂದ ಅವರ ದೇಹವನ್ನು ಇಳಿಸುವಾಗ ಕೈ ಅಲುಗಾಡಿಸಿದ್ದಾರೆ. ಕಣ್ಣು ಬಿಟ್ಟಿದ್ದಾರೆ. ಇತ್ತ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆದರೆ ಇವರು ಎದ್ದು ಕುಳಿತು ಚಹಾ,ಆಹಾರ ಸೇವಿಸಿದ್ದು ಎಲ್ಲರಿಗೂ ಆಶ್ಚರ್ಯವಾಯಿತು. ಸಂತೋಷ್ ಅವರ ಸಹೋದರರ ಕುಟುಂಬ ಸಮೇತ ಸವದತ್ತಿ ಎಲ್ಲಮ್ಮ ದೇವಿ ದರ್ಶನಕ್ಕೆ ಹೋದವರು ಸುದ್ದಿ ತಿಳಿದು ಅರ್ಧಕ್ಕೆ ವಾಪಸ್ ಬಂದಿದ್ದರು. ಮಾಲು ಬದುಕುಳಿದಿದ್ದು ಎಲ್ಲಮ್ಮನ ಪವಾಡ ಎಂದೇ ಗ್ರಾಮಸ್ಥರು ಹೇಳುತ್ತಿದ್ದಾರೆ.

Facebook Comments