ವೇಶ್ಯಾವಾಟಿಕೆ ದಂಧೆ : ಅಪಾಯಕಾರಿ ಚಟುವಟಿಕೆ ನಿಗ್ರಹ ಕಾಯ್ದೆಯಡಿ ಮಹಿಳೆ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ನಿರಂತರವಾಗಿ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತ ನಾಗರಿಕ ಸಮಾಜಕ್ಕೆ ಕಳಂಕವಾಗಿದ್ದ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಇದೇ ಮೊದಲ ಬಾರಿಗೆ ಅಪಾಯಕಾರಿ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಬಂಧಿಸಿದ್ದಾರೆ.

ಹೊರಮಾವು ಮುಖ್ಯರಸ್ತೆಯ ಎಸ್‍ಕೆಎಂಆರ್ ಬಡಾವಣೆ ನಿವಾಸಿ ಸ್ವಾತಿ ಅಲಿಯಾಸ್ ಸರಸ್ವತಿ ಅಲಿಯಾಸ್ ಆಶಾ (37) ಬಂಧಿತ ಮಹಿಳೆ. ಈಕೆ ಕಳೆದ 2007ರಿಂದಲೂ ವೇಶ್ಯಾವಾಟಿಕೆ ದಂಧೆ ನಡೆಸಿಕೊಂಡು ಬರುತ್ತಿದ್ದು,

ಕಾಟನ್‍ಪೇಟೆ, ಎಚ್‍ಎಸ್‍ಆರ್ ಲೇಔಟ್, ಮಾರತ್ತಹಳ್ಳಿ, ಮಹದೇವಪುರ ಮತ್ತಿತರಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಸಾಜ್ ಪಾರ್ಲರ್, ಸ್ಪಾ ಮತ್ತು ಸಲೂನ್‍ಗಳನ್ನು ತೆರೆದು ಹೊರರಾಜ್ಯದ ಯುವತಿಯರನ್ನು ಉದ್ಯೋಗ ನೆಪದಲ್ಲಿ ಮಾನವ ಕಳ್ಳಸಾಗಾಣಿಕೆ ಮೂಲಕ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದಳು.

ಸ್ವಾತಿಯನ್ನು ಪೆÇಲೀಸರು ಹಲವು ಬಾರಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ನಂತರ ಜಾಮೀನು ಪಡೆದು ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡು ತನ್ನ ವಿಳಾಸ ಬದಲಾವಣೆ ಮಾಡಿಕೊಂಡು ಬೇರೊಂದು ಸ್ಥಳದಲ್ಲಿ ತನ್ನ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಮುಂದುವರಿಸುತ್ತಿದ್ದಳು.

ಸ್ವಾತಿಯ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಕ್ರಮ ಮದ್ಯ ವ್ಯವಹಾರ, ಮಾದಕ ದ್ರವ್ಯ ಮಾರಾಟಗಾರರು, ಜೂಜುಕೋರರು, ಗೂಂಡಾಗಳು, ವೇಶ್ಯಾವೃತ್ತಿ ನಡೆಸುವವರು, ಕೊಳಚೆ ಪ್ರದೇಶ ಅತಿಕ್ರಮಿಸುವವರು ಹಾಗೂ ಆಡಿಯೋ, ವಿಡಿಯೋ ಕೃತಿಚೌರ್ಯಗಾರರನ್ನು ಬಂಧಿಸಲು ನಗರದಲ್ಲಿ ಅಪಾಯಕಾರಿ ಚಟುವಟಿಕೆ ನಿಗ್ರಹ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ನಗರದಲ್ಲಿ ಮಾನವ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ ದಂಧೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ವೃತ್ತಿಪರ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ವಾತಿಯನ್ನು ಸಿಸಿಬಿ ಪೊಲೀಸರು ಅನೈತಿಕ ವ್ಯವಹಾರಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಲು ಅನುಮತಿ ನೀಡುವಂತೆ ಸಿಸಿಬಿ ಡಿಸಿಪಿ ಕುಲ್‍ದೀಪ್‍ಕುಮಾರ್ ಜೈನ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದರು.

ಸಂದೀಪ್ ಪಾಟೀಲ್ ಮತ್ತು ಕುಲ್‍ದೀಪ್‍ಕುಮಾರ್ ಜೈನ್ ಅವರು ಸಿಸಿಬಿ ಪೊಲೀಸರ ಈ ನಿಲುವನ್ನು ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಶಿಫಾರಸು ಮಾಡಿದ್ದರು. ಇದೀಗ ಭಾಸ್ಕರ್‍ರಾವ್ ಅವರು ಮಹಿಳೆಯನ್ನು ಅಪಾಯಕಾರಿ ಚಟುವಟಿಕೆ ನಿಗ್ರಹ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಿದ್ದಾರೆ.

Facebook Comments

Sri Raghav

Admin