ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ತಾರತಮ್ಯ 10 ದಿನಗಳ ವಿಚಾರಣೆ ನಿಗದಿಗೊಳಿಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : – ಕೇರಳದ ಶಬರಿ ಮಲೆ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ತಾರತಮ್ಯ ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠವು 10 ದಿನಗಳ ಅವಧಿಯೊಳಗೆ ವಿಚಾರಣೆ ಪೂರ್ಣಗೊಳಿಸಲಿದೆ ಎಂದು ಸುಪ್ರೀಂಕೋರ್ಟ್ ಇಂದು ತಿಳಿಸಿದೆ.

ಈ ಪ್ರಕರಣವನ್ನು ಇತ್ಯರ್ಥಗೊಳಿಸಲು 10 ದಿನಗಳಿಗಿಂತ ಹೆಚ್ಚಿನ ಅವಧಿ ಬೇಕಿಲ್ಲ. ಕೆಲವರು ಇದಕ್ಕೆ ಹೆಚ್ಚು ಸಮಯ ಬೇಕೆಂದು ಕೋರಿದರೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠವು ಸ್ಪಷ್ಟಪಡಿಸಿತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಉದ್ಭವಿಸಿರಬಹುದಾದ ಪ್ರಶ್ನೆಗಳಿಗೆ ಸಂಪೂರ್ಣವಾಗಿ ಕಾನೂನು ಸ್ವರೂಪದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ಇದಕ್ಕೆ ಹೆಚ್ಚಿನ ಕಾಲಾವಕಾಶದ ಅಗತ್ಯ ಇರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಮತ್ತು ಅಲ್ಲಿನ ತಾರತಮ್ಯಗಳ ಕುರಿತು ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶಗಳು ಮತ್ತು ನಿರ್ದೇಶನಗಳಿಗೆ ಸಂಬಂಧಪಟ್ಟಂತೆ ವಕೀಲರ ಸಭೆಯೊಂದು ನಡೆಯಿತು. ಆದರೆ ಒಂಭತ್ತು ನ್ಯಾಯಾಧೀಶರ ಪೀಠದ ಮುಂದೆ ಪರಿಗಣಿಸಬೇಕಾದ ಸಾಮಾನ್ಯ ಕಾನೂನು ಪ್ರಶ್ನೆಗಳ ಕುರಿತು ಯಾವುದೇ ಅಂತಿಮ ನಿರ್ಧಾರ ಹೊರಹೊಮ್ಮಲಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ನಾವು ಪರಿಗಣನೆಗಾಗಿ ಸಾಮಾನ್ಯ ಪ್ರಶ್ನೆಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್ ಈ ಪ್ರಶ್ನೆಗಳನ್ನು ಪರಿಗಣಿಸಬಹುದಾಗಿರುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವಕೀಲರು ಚರ್ಚಿಸಿದ ವಿಷಯಗಳ ಕುರಿತ ಮಾಹಿತಿ ನೀಡುವಂತೆ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿತು.

Facebook Comments