3 ಮಕ್ಕಳನ್ನು ಅಮಾನುಷವಾಗಿ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಪ್ಪಳ,ಜೂ 18: ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ಮೂವರು ಮಕ್ಕಳನ್ನು ಅಮಾನುಷವಾಗಿ ಕೊಂದು ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕುಕನೂರು ತಾಲೂಕು ಯರೇಹಂಚಿನಾಳ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಯಲಮ್ಮ ಬಾರಕೇರ (28) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ತನ್ನ ಮಕ್ಕಳಾದ ಅಕ್ಷತಾ (6), ಕಾವ್ಯ(4), ನಾಗರಾಜ (2) ಅವರನ್ನು ನೀರಿನ ಪಾತ್ರೆಯಲ್ಲಿ ಮುಳುಗಿಸಿ ಹತ್ಯೆಗೈದಿದ್ದಾಳೆ.

ಈಕೆಯ ಪತಿ ಮದ್ಯ ವ್ಯಸನಿಯಾಗಿದ್ದು ತನ್ನ ಹೆಂಡತಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ನಿತ್ಯ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ನಿನ್ನೆ ರಾತ್ರಿ ಗಂಡ ಮನೆಯ ಹೊರಗಡೆ ಮಲಗಿದ್ದ ಸಂದರ್ಭದಲ್ಲಿ ಹಿರಿಯ ಮಗಳಾದ ಅಕ್ಷತಾಳನ್ನು ನೀರಿನ ಕೊಳಗದೊಳಗೆ ಮುಳುಗಿಸಿ ಹತ್ಯೆ ಮಾಡಿದ್ದಾಳೆ.

ತದನಂತರ ಎರಡನೇ ಮಗಳಾದ ಕಾವ್ಯಳನ್ನು ಬಕೆಟ್‍ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ನಂತರ 2 ವರ್ಷದ ಎಳೆಯ ಕಂದಮ್ಮ ನಾಗರಾಜ್‍ನನ್ನು ನೀರಿನ ಪಾತ್ರೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಕಡೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಬರ್ಬರ ಕೃತ್ಯ ಕಂಡ ಯರೇಹಂಚಿನಾಳ ಗ್ರಾಮದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದಲ್ಲಿ ಶೋಕದ ಛಾಯಾ ಮಡುಗಟ್ಟಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕುಕನೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin