“ಕೈಕೊಟ್ಟು ಪರಾರಿಯಾಗಿರುವ ನನ್ನ ಪ್ರಿಯಕರನನ್ನು ಹುಡುಕಿಕೊಡಿ ಸ್ವಾಮಿ..!”

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಜು.19- ನನ್ನ ತಲೆ ಮೇಲೆ ಕೈಯಿಟ್ಟು ಮದುವೆಯಾಗುತ್ತೇನೆ ಎಂದು ಪ್ರಮಾಣ ಮಾಡಿ ಈಗ ನನ್ನ ಜೀವನ ಹಾಳು ಮಾಡಿ ಪರಾರಿಯಾಗಿರುವ ಪ್ರಿಯಕರನನ್ನು ಹುಡುಕಿಕೊಟ್ಟು ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಿನ ಕುಂತೂರು ಕೆರೆಗೆ ಎಮ್ಮೆ ಮೇಯಿಸಲು ಹೋಗುತ್ತಿದ್ದಾಗ ಅನ್ಯಕೋಮಿನ ಯುವಕ ಕುಮಾರ ಎಂಬಾತ ನನಗೆ ಅನ್ಯಾಯ ಮಾಡಿದ್ದಾನೆ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆತನನ್ನು ಹುಡುಕಿ ಮದುವೆ ಮಾಡಿಸಿಕೊಡಿ ಎಂದು ಸಂತ್ರಸ್ತ ಯುವತಿ ಅಲವತ್ತುಕೊಂಡಿದ್ದಾರೆ.

ನಮ್ಮ ಮನೆಯಲ್ಲಿ ಮೂರು ಎಮ್ಮೆಗಳಿದ್ದು, ಅವುಗಳನ್ನು ಮೇಯಿಸಲು ಪ್ರತಿನಿತ್ಯ ಕುಂತೂರು ಕೆರೆಗೆ ಹೋಗುತ್ತಿದ್ದೆ. ಅದೇ ಗ್ರಾಮದ ತಾಯಮ್ಮ ಎಂಬುವವರ ಮಗ ಕುಮಾರ ಎಂಬಾತ ಎಮ್ಮೆ ಮೇಯಿಸಲು ಬರುತ್ತಿದ್ದ. ನಮ್ಮೊಡನೆ ದನ-ಕುರಿ ಮೇಯಿಸಲು ಮೂರ್ನಾಲ್ಕು ಜನ ಕೂಡ ಬರುತ್ತಿದ್ದರು. ಆದರೆ, ಒಂದು ದಿನ ಬೇರೆಯವರೆಲ್ಲ ಟೀ ಕುಡಿಯಲೆಂದು ಕುಂತೂರು ಸರ್ಕಲ್‍ಗೆ ತೆರಳಿದ್ದರು.

ನಾನು ಒಂಟಿಯಾಗಿರುವುದನ್ನು ಗಮನಿಸಿದ ಕುಮಾರ ನನ್ನ ಬಳಿಗೆ ಬಂದು ನಿನಗೆ ಮದುವೆಯಾಗಿದೆಯಾ ಎಂದು ಕೇಳಿದ. ನಾನು ಇಲ್ಲ ಎಂದಾಗ ಆತ ನನ್ನ ಹೆಗಲ ಮೇಲೆ ಕೈಯಿಟ್ಟು ನನಗೂ ವಿವಾಹವಾಗಿಲ್ಲ. ನಾವಿಬ್ಬರೂ ಮದುವೆಯಾಗೋಣ ಎಂದು ಪೀಡಿಸಿದ.  ನೀನು ಬೇರೆ ಜಾತಿಗೆ ಸೇರಿದ ವ್ಯಕ್ತಿ. ನಮ್ಮಿಬ್ಬರ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದಾಗ ಆತ ತನ್ನ ತಲೆ ಮೇಲೆ ಕೈಯಿಟ್ಟು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಆಣೆ ಮಾಡಿದ. ಹೀಗಾಗಿ ನಾನು ಆತನ ಮಾತನ್ನು ನಂಬಿ ಮೋಸ ಹೋಗಿದ್ದೇನೆ.

ನನ್ನ ಸ್ನೇಹವನ್ನು ದುರುಪಯೋಗಪಡಿಸಿಕೊಂಡ ಕುಮಾರ ಮೂರ್ನಾಲ್ಕು ಬಾರಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಮ್ಮಿಬ್ಬರ ಪ್ರೇಮ ವಿಚಾರ ಕುಮಾರನ ಮನೆಯವರಿಗೆ ತಿಳಿಯುತ್ತಿದ್ದಂತೆ ಆತ ಎಮ್ಮೆ ಮೇಯಿಸಲು ಬರುವುದನ್ನು ನಿಲ್ಲಿಸಿದ. ಇದರಿಂದ ಆತಂಕಗೊಂಡ ನಾನು ಕುಮಾರನ ಮನೆಗೆ ತೆರಳಿ ಆತನ ತಾಯಿ ತಾಯಮ್ಮಳಿಗೆ ವಿಷಯ ತಿಳಿಸಿದಾಗ ನಿನ್ನನ್ನು ನನ್ನ ಸೊಸೆ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ನಿರಾಕರಿಸಿದರು.

ಮಾತ್ರವಲ್ಲ, ಮನೆಗೆ ಬೀಗ ಜಡಿದುಕೊಂಡು ಕುಮಾರನ ಇಡೀ ಕುಟುಂಬ ನಾಪತ್ತೆಯಾಗಿದೆ. ಆದರೂ ನಾನು ಹಠ ಬಿಡದೆ ಕುಮಾರನ ಮನೆ ಮುಂದೆಯೇ ಮೂರು ದಿನ ಕುಳಿತು ಪ್ರತಿಭಟನೆ ನಡೆಸಿದೆ. ವಿಷಯ ತಿಳಿದ ನೀವು ನನ್ನನ್ನು ಕರೆದುಕೊಂಡು ಪ್ರಿಯದರ್ಶಿನಿ ಮಹಿಳಾ ಪುನಶ್ಚೇತನ ಕೇಂದ್ರ ಸಾದಾರ ಗೃಹಕ್ಕೆ ಸೇರಿಸಿದ್ದೀರಿ. ಕುಮಾರನಿಂದ ಅನ್ಯಾಯಕ್ಕೊಳಗಾಗಿರುವ ನನ್ನನ್ನು ನನ್ನ ಗ್ರಾಮದವರು ಸೇರಿಸುವುದಿಲ್ಲ.

ಹೀಗಾಗಿ ಆತ ಎಲ್ಲೇ ಇದ್ದರೂ ಕರೆತಂದು ಆತನೊಂದಿಗೆ ಮದುವೆ ಮಾಡಿಸಿಕೊಡಿ ಸ್ವಾಮಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗೇಶ್, ಗ್ರಾಮಾಂತರ ಠಾಣೆ ಪಿಎಸ್‍ಐ ವಿ.ಸಿ.ಅಶೋಕ್ ಸಮ್ಮುಖದಲ್ಲಿ ಕೊಳ್ಳೇಗಾಲ ವೃತ್ತ ನಿರೀಕ್ಷಕ ಶ್ರೀಕಾಂತ್‍ಗೆ ಸಂತ್ರಸ್ತ ಯುವತಿ ಮನವಿ ಮಾಡಿಕೊಂಡಿದ್ದಾಳೆ.

Facebook Comments