ಕೊರೊನಾ ಭಯದಿಂದ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆ, ಅಮಾಯಕ ಮಹಿಳೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 11- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅನ್ಯ ರೋಗಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸತ್ಯಮ್ಮ (47) ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಮಹಿಳೆ.ಜಯನಗರದ ಬೈರಸಂದ್ರ ನಿವಾಸಿಯಾದ ಸತ್ಯಮ್ಮ ಶನಿವಾರ ಸಂಜೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ದಾಖಲಾಗಿದ್ದರು.

ನಿನ್ನೆ ರಾತ್ರಿ 9.45ಕ್ಕೆ ಸತ್ಯಮ್ಮ ಅವರಿಗೆ ಸೀರಿಯಸ್ ಆದ್ದರಿಂದ ಅವರನ್ನು ಸಮೀಪದಲ್ಲೇ ಇರುವ ಅಪೊಲೊ ಆಸ್ಪತ್ರೆಗೆ ದಾಖಲಿಸುವಂತೆ ಸೇವಾಶ್ರಮ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಸತ್ಯಮ್ಮ ಅವರನ್ನು ಆ್ಯಂಬುಲೆನ್ಸ್‍ನಲ್ಲಿ ಅಪೊಲೊ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಲ್ಲಿನ ಸಿಬ್ಬಂದಿಗಳು ಸತ್ಯಮ್ಮ ಅವರನ್ನು ದಾಖಲು ಮಾಡಿಕೊಳ್ಳದೆ ಅಪೊಲೊ ಆಸ್ಪತ್ರೆ ಹೊರಭಾಗದಲ್ಲೇ ನಿಲ್ಲಿಸಿಕೊಂಡಿದ್ದಾರೆ.

ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಸತ್ಯಮ್ಮ ಆ್ಯಂಬುಲೆನ್ಸ್‍ನಲ್ಲೇ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಸತ್ಯಮ್ಮ ಅವರ ಉಸಿರಾಟ ನಿಂತ ಕೂಡಲೇ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಲು ಮುಂದಾದಾಗ ವೈದ್ಯರು ಸತ್ಯಮ್ಮ ಅವರನ್ನು ದಾಖಲು ಮಾಡಿಕೊಂಡ ಒಂದು ಗಂಟೆಯೊಳಗೆ ರೋಗಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳ ನಿರ್ಲಕ್ಷ್ಯ ಖಂಡಿಸಿ ಸತ್ಯಮ್ಮ ಕುಟುಂಬಸ್ಥರು ಅಪೊಲೊ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.  ಕೊರೊನಾ ಕಾರಣವೊಡ್ಡಿ ಇತರ ರೋಗಗಳಿಂದ ನರಳುವವರನ್ನು ಖಾಸಗಿ ಆಸ್ಪತ್ರೆ ವೈದ್ಯರು ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Facebook Comments

Sri Raghav

Admin