ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ ಜೊತೆ ಮಕ್ಕಳ ಆರೈಕೆಗೂ 6 ತಿಂಗಳ ರಜೆ
ಬೆಂಗಳೂರು,ಮಾ.8- ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆಯೊಂದಿಗೆ ಆರು ತಿಂಗಳವರೆಗೆ ಮಕ್ಕಳ ಆರೈಕೆ ರಜೆಯನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದರು.ವಿಧಾನಸಭೆಯಲ್ಲಿಂದು 2021- 2022ನೇ ಸಾಲಿನ ಆಯವ್ಯಯ ದಲ್ಲಿ ಈ ಘೋಷಣೆ ಮಾಡಿದ ಅವರು, ಮಹಿಳಾ ಉದ್ದೇಶಿತ ಯೋಜನೆಗಳಿಗೆ ಆಯವ್ಯಯದಲ್ಲಿ 37,188 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಆಡಳಿತ ಯಂತ್ರದ ಬಹುಮುಖ್ಯ ಭಾಗವಾಗಿರುವ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಇದು ಪೂರಕ ಇಚ್ಚೆಯಾಗಲಿದ್ದು, ಮಹಿಳೆಯರ ಕಾರ್ಯಕ್ಷಮತೆಯೂ ಇದರಿಂದ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ಉದ್ಯೋಗದಲ್ಲಿ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಕಾನೂನು ತೊಡಕುಗಳ ಕಾರಣ ಮಹಿಳೆಯರು ಕೈಗೊಳ್ಳಲು ಸಾಧ್ಯವಾಗದ ಉದ್ಯೋಗಗಳ ಬಗ್ಗೆ ನಿಯಮಾವಳಿಗಳನ್ನ ಪರಿಶೀಲಿಸು ವುದಾಗಿ ಭರವಸೆ ನೀಡಿದ್ದಾರೆ.
# ಸಹಾಯ ಕೇಂದ್ರ ಸ್ಥಾಪನೆ:
ನಿರ್ಭಯ ಯೋಜನೆಯಡಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೇಫ್ಟಿಸಿಟಿ ಯೋಜನೆಯನ್ನು ಚುರುಕು ಗೊಳಿಸಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಮಹಿಳೆಯ ರಿಗೆ ಹೆಚ್ಚಿನ ಸುರಕ್ಷತೆಗಳನ್ನು ಖಾತ್ರಿ ಪಡಿಸಲಾಗುವುದು.
ರಾಜ್ಯದೆಲ್ಲೆಡೆ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಗಸ್ತನ್ನು ತಂತ್ರಜ್ಞಾನ ಆಧಾರಿತ ಇ-ಬೀಟ್ ಮೂಲಕ ತೀವ್ರಗೊಳಿಸ ಲಾಗುವುದು. ಬೀಟ್ ವ್ಯವಸ್ಥೆ ಇನ್ನಷ್ಟು ಉತ್ತಮವಾಗಲಿದೆ. ದೌರ್ಜನ್ಯಕ್ಕೊಳ ಗಾದ ಮಹಿಳೆಯರಿಗೆ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದೊಂದಿಗೆ ಹೊಸೂರು ರಸ್ತೆಯ ಸುಧಾರಣಾ ಸಂಸ್ಥೆಯ ಆವರಣದಲ್ಲಿ ಒಂದು ಉತ್ಕøಟತಾ ಕೇಂದ್ರ ಸ್ಥಾಪಿಸಲಾಗುವುದು. ಇದು ಮಹಿಳೆಯರ ರಕ್ಷಣೆ ಕುರಿತ ನೀತಿ-ನಿರೂಪಣೆಯಲ್ಲಿ ಸರ್ಕಾರಕ್ಕೆ ನೆರವಾಗಲಿದೆ ಎಂದರು.