ಮಹಿಳಾ ದಿನದಂದೇ ನಾರಿಯರಿಗೆ ಸಿಎಂ ಬಂಪರ್ ಗಿಫ್ಟ್..!
ಬೆಂಗಳೂರು,ಮಾ.8- ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಯಾವುದೇ ತೆರಿಗೆ ಭಾರ ವಿಸದೆ, ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುವುದರ ಜೊತೆ ಎಲ್ಲಾ ಸಮುದಾಯಕ್ಕೂ ಭರಪೂರ ಕೊಡುಗೆ ನೀಡಿ ಮುದ್ರಾಂಕ ಶುಲ್ಕ ಇಳಿಕೆ ಮಾಡಿ, ಬೆಂಗಳೂರಿಗೂ ಸಿಂಹಪಾಲು ಅನುದಾನ ನೀಡಿರುವ ಸಮತೋಲನದ ಬಜೆಟ್ ಮಂಡನೆಯಾಗಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ 2021-22ನೇ ಸಾಲಿನ ಮಂಡಿಸಿದ ಬಜೆಟ್ನಲ್ಲಿ ನಿರೀಕ್ಷೆಯಂತೆ, ಈ ಬಾರಿ ಯಾವುದೇ ಹೊಸ ತೆರಿಗೆಯನ್ನು ವಿಸದೆ ಜನಸಾಮಾನ್ಯರಿಗೆ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
35 ಲಕ್ಷದಿಂದ 45 ಲಕ್ಷದವರೆಗಿನ ಮೌಲ್ಯದ ಅಪಾರ್ಟ್ಮೆಂಟ್ಗಳ ನೋಂದಣಿ ಶುಲ್ಕವನ್ನು ಶೇ.5ರಿಂದ 3ಕ್ಕೆ ಕಡಿಮೆ ಮಾಡಲಾಗಿದೆ. ಇನ್ನು ಪ್ರತಿ ಸಮುದಾಯಕ್ಕೂ ಬಜೆಟ್ನಲ್ಲಿ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಒಕ್ಕಲಿಗ ಸಮುದಾಯದ ಸರ್ವೋತ್ತಮ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಗೆ 500 ಕೋಟಿ ಹಾಗೂ ಈಗಾಗಲೇ ಘೋಷಣೆಯಾಗಿರುವ ವೀರಶೈವ ಲಿಂಗಾಯಿತ ಸಮಗ್ರ ಅಭಿವೃದ್ಧಿಗೆ 500 ಕೋಟಿ ಘೋಷಿಸಲಾಗಿದೆ. ಬಡ, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭ್ಯುದಯಕ್ಕೆ ಸರ್ಕಾರ 500 ಕೋಟಿ ಅನುದಾನವನ್ನು ಒದಗಿಸುವ ಮೂಲಕ ಹಿಂದ ವರ್ಗವನ್ನು ಗೆಲ್ಲುವ ಕಸರತ್ತು ನಡೆಸಲಾಗಿದೆ.
[ ಕರ್ನಾಟಕ ಬಜೆಟ್ – 2021 (All Updates) ]
ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಬ, ಬೋವಿ, ತಾಂಡ,ಸ ಫಾಯಿ ಕರ್ಮಚಾರಿ, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ , ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ದಿಗಳ ನಿಗಮ, ಮಡಿವಾಳ ಮಾಚಿದೇವ, ಉಪ್ಪಾರ, ಆರ್ಯವೈಶ್ಯ, ವಿಶ್ವಕರ್ಮ, ಮರಾಠಿ, ಕಾಡುಗೊಲ್ಲ, ನಿಜಶರಣರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಬಂಪರ್ ಕೊಡುಗೆ ಘೋಷಿಸಲಾಗಿದೆ.
ಬ್ರಾಹ್ಮಣರ ಅಭಿವೃದ್ಧಿ ಮಂಡಳಿಗೆ 50 ಕೋಟಿ , ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 1500 ಕೋಟಿ, ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ 50 ಕೋಟಿ ಅನುದಾನ ಪ್ರಕಟಿಸಲಾಗಿದೆ. ಕೃಷಿ, ನೀರಾವರಿ, ಮೂಲಸೌಕರ್ಯ ಸುಧಾರಣೆ, ಶಿಕ್ಷಣ, ಆರೋಗ್ಯ, ಜಲಮೂಲ, ಜಲಕಾಯಗಳ ರಕ್ಷಣೆ, ಪ್ರವಾಸೋದ್ಯಮ, ಆತ್ಮನಿರ್ಭರ ಯೋಜನೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ಒತ್ತು ಕೊಟ್ಟಿರುವುದು ವಿಶೇಷವಾಗಿದೆ.
ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಕೃಷ್ಣ ಮೇಲ್ದಂಡೆ ಯೋಜನೆಯ ವಿವಿಧ ಕಾಮಗಾರಿಗಳಿಗೆ 5600 ಕೋಟಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಅನುಷ್ಠಾನಕ್ಕೆ ಅಡ್ಡಿಯಾಗಿರುವ ಭೂ ಸ್ವಾೀನ ಪ್ರಕ್ರಿಯೆ ಪ್ರಾರಂಭ, ಭದ್ರ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಘೋಷಿಸಲು ಕೇಂದ್ರದ ಮೇಲೆ ಒತ್ತಡ, ತುಂಗಭದ್ರ ಜಲಾಶಯದಲ್ಲಿ ಹೂಳು ತೆಗೆಯಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ, ಮಹದಾಯಿ ನದಿನೀರು ಕುಡಿಯುವ ಯೋಜನೆಯನ್ನು ಅನುಷ್ಠ್ಟಾನ ಮಾಡುವ ವಾಗ್ದಾನ ಮಾಡಲಾಗಿದೆ.
# ಮಹಿಳೆಯರ ಸಬಲೀಕರಣಕ್ಕೆ ಒತ್ತು:
ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಬೆಂಗಳೂರು ಮತ್ತು ಇತರೆ ನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ, ಇದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭ, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಸ್ಪತ್ರೆ, ವೈದ್ಯಕೀಯ, ಆರೈಕೆ ಮತ್ತಿತರ ಸೇವಾ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಉದ್ಯಮಿಗಳಿಗೆ ಹಣಕಾಸು ಸಂಸ್ಥೆಯಿಂದ ಶೇ.4ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸುವ ಯೋಜನೆಯನ್ನು ಘೋಷಿಸಲಾಗಿದೆ.
ಅತೀ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಸಂಜೀವಿನಿ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘ, ಕಾಟರಿಂಗ್, ಸ್ವಚ್ಛತಾ ಕಾರ್ಯ, ಕೋಳಿ ಸಾಗಾಣಿಕೆ, ಕುರಿ ಸಾಗಾಣಿಕೆ, ಘನತ್ಯಾಜ್ಯ ನಿರ್ವಹಣೆ, ಉದ್ಯಮ ಸ್ಥಾಪನೆಗೆ ವಿಶೇಷ ಆರ್ಥಿಕ ನೆರವು ಪ್ರಕಟಿಸಲಾಗಿದೆ.
ನಿರ್ಭಯಾ ಯೋಜನೆಯಡಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಹಾಯ ಕೇಂದ್ರಗಳ ಸ್ಥಾಪನೆ, ಬೆಂಗಳೂರು ನಗರ ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾಗಳ ಅಳವಡಿಕೆ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತ ನೆರವು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸೆನ್ಸ್ ಪಡೆದು ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ನಿವೇಶನ, ಗೋದಾಮು, ಅಂಗಡಿ ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿ, ಮಹಿಳಾ ವಾಣಿಜ್ಯ ಉದ್ಯಮಿಗಳನ್ನು ಬೆಂಬಲಿಸಲು 5 ಕೋಟಿ ರೂ. ವೆಚ್ಚದಲ್ಲಿ ವೆಲಿವೇಟ್ ವುಮೆನ್ ಎಂಟರ್ಪ್ರಿನರ್ಸ್ಶಿಪ್ ಸೇರಿದಂತೆ ಈ ಬಾರಿ ಬಜೆಟ್ನಲ್ಲಿ 37,188 ಕೋಟಿ ಅನುದಾನ ಒದಗಿಸಲಾಗಿದೆ.
ನಾಡಿನ ಅನ್ನದಾತನಿಗೂ ಈ ಬಜೆಟ್ನಲ್ಲಿ ಭರಪೂರ ಕೊಡುಗೆ ನೀಡಲಾಗಿದೆ. ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.40ರಿಂದ 50ಕ್ಕೆ ಹೆಚ್ಚಳ. ಆತ್ಮನಿರ್ಭರ ಭಾರತ ಅಭಿಯಾನದಡಿ ಶೀತಲಗೃಹ ನಿರ್ಮಾಣ, ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೀಡುತ್ತಿದ್ದ ಸಹಾಯಧನವನ್ನು ಶೇ.15ರಷ್ಟು ಹೆಚ್ಚಿಸಿ 50 ಕೋಟಿ ಅನುದಾನವನ್ನು ಘೋಷಿಸಲಾಗಿದೆ.