ಮಹಿಳಾ ಉದ್ಯಮಿಗಳಿಗೆ ಬಜೆಟ್ ನಲ್ಲಿ ಭರ್ಜರಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.8- ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಸ್ಪತ್ರೆ, ವೈದ್ಯಕೀಯ ಹಾರೈಕೆ ಮತ್ತಿತರ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯಮಿಗಳಿಗೆ 2 ಕೋಟಿ ರು.ಗಳವರೆಗೆ ಶೇ.4ರ ರಿಯಾಯಿತಿ ಬಡ್ಡಿ ದರದಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಸಾಲ ಸೌಲಭ್ಯ ಒದಗಿಸಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.

ವಿಧಾನಸಭೆಯಲ್ಲಿಂದು ಮಂಡಿಸಿದ 2021-22ನೇ ಸಾಲಿನ ಆಯವ್ಯಯದಲ್ಲಿ ಈ ಪ್ರಸ್ತಾಪ ಮಾಡಿದ್ದು, ನಗರ ಪ್ರದೇಶದ ಉದ್ಯೋಗಸ್ಥ ಮಹಿಳೆಯರಿಗೆ, ಮಕ್ಕಳ ಆರೈಕೆಗೆ ನೆರವಾಗಲು ಬೆಂಗಳೂರು ಹಾಗೂ ಇತರೆ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಹಂತ ಹಂತವಾಗಿ ಶಿಶುಪಾಲನಾ ಕೇಂದ್ರಗಳನ್ನಾಗಿ ಉನ್ನತಿಕರಿಸುವುದಾಗಿ ಹೇಳಿದರು.

ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಮೂಲಕ ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವುದಾಗಿ ಹೇಳಿದ್ದಾರೆ. ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದ್ದು, ಒಟ್ಟು ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದು, ರಾಷ್ಟ್ರ ನಿರ್ಮಾಣ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಾಗ ಸಮೃದ್ಧಿಯ ವಾತಾವರಣ ನಿರ್ಮಾಣವಾಗುವುದು ಕಠಿಣವಲ್ಲ. ಮಹಿಳೆಯರ ಆತ್ಮಬಲ ವೃದ್ಧಿಯಾಗುವುದರ ಹಿನ್ನೆಲೆಯಲ್ಲಿ ಮಹಿಳೆಯರ ಸಮಾನತೆ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳು, ಕೇಟರಿಂಗ್, ಸ್ವಚ್ಛತಾ ಕಾರ್ಯ, ಕೋಳಿ, ಕುರಿ ಸಾಕಾಣಿಕೆ, ಘನತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ನಿರ್ಮಾಣ ಕಾರ್ಯ ಮತ್ತಿತರ ಕ್ಷೇತ್ರಗಳ 6 ಸಾವಿರ ಅತೀ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಪಂಚಾಯತ್ರಾಜ್ ಸಂಸ್ಥೆ ಮೂಲಕ ಬೆಂಬಲ ನೀಡಲಾಗುವುದು.

ಇದರಿಂದ 60ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ದೊರೆಯಲಿದೆ. ಹಪ್ಪಳ, ಉಪ್ಪಿನಕಾಯಿ, ರೊಟ್ಟಿ, ಮಸಾಲೆ ಪುಡಿ ಸೇರಿದಂತೆ ಆಹಾರ ಪದಾರ್ಥ ತಯಾರಿಸುವ ಮಹಿಳೆಯರ ಸಣ್ಣ ಉದ್ಯಮಗಳಿಗೆ ಆಹಾರ ಸುರಕ್ಷತೆ ಪ್ಯಾಕಿಂಗ್ ಬ್ರ್ಯಾಂಡಿಗ್, ರಸ್ತೆ ಬದಿ ಮಳಿಗೆಗಳ ಮತ್ತು ಆನ್ಲೈನ್ ಮೂಲಕ ಮಾರುಕಟ್ಟೆ ಸಂಪರ್ಕ ಮತ್ತಿತರ ತಾಂತ್ರಿಕ ನೆರವು ನೀಡಲಾಗುವುದು. ಪ್ರತಿ ತಾಲೂಕಿಗೆ 10ರಂತೆ 2260 ಕಿರು ಉದ್ಯಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

Facebook Comments

Sri Raghav

Admin