ಒಂಟಿ ಮಹಿಳೆಯರ ಸರ ದೋಚುತ್ತಿದ್ದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಬೆಳಗಿನ ಜಾವ ಮತ್ತು ಸಂಜೆ ವೇಳೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಉತ್ತರ ವಿಭಾಗದ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಸಿ 134 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಅರಸೀಕೆರೆ ಮೂಲದ ಶಿವರಾಜ (23), ರಾಯಚೂರು ಜಿಲ್ಲೆಯ ಪ್ರಕಾಶ್ (27), ಬೆಂಗಳೂರಿನ ಸೋಮೇಶ್ವರ ನಗರದ ಪ್ರಸನ್ನರಾಜ್ (27) ಮತ್ತು ವಿದ್ಯಾರಣ್ಯಪುರದ ರತ್ನಾ (32) ಬಂತರು.

ಆರೋಪಿಗಳಿಂದ 10 ಲಕ್ಷ ರೂ. ಬೆಲೆಬಾಳುವ 134 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಫೆಬ್ರವರಿ 25ರಂದು ಸಂಜೆ 5.15ರಲ್ಲಿ ಸುಭಾಷ್‍ನಗರದ ಲಕ್ಷ್ಮಿ ಎಂಬುವವರು ಎರಡು ವರ್ಷದ ಮೊಮ್ಮಗಳನ್ನು ಎತ್ತಿಕೊಂಡು ತರಕಾರಿ ತೆಗೆದುಕೊಂಡು ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಬರುತ್ತಿದ್ದಾಗ ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರ ಪೈಕಿ ಒಬ್ಬಾತ ಸ್ವಲ್ಪ ಮುಂದೆ ಹೋಗಿ ಬೈಕ್ ನಿಲ್ಲಿಸಿ ನಂತರ ವಾಪಸ್ ಬಂದು ಎರಡು ಎಳೆ ಚಿನ್ನದ ಮಾಂಗಲ್ಯ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ.

ಲಕ್ಷ್ಮಿ ಅವರು ಪ್ರತಿರೋಧವೊಡ್ಡಿ ಸಹಾಯಕ್ಕೆ ಕೂಗಿಕೊಂಡಾಗ ಅರ್ಧ ಚಿನ್ನದ ಮಾಂಗಲ್ಯ ಸರ, ಕಾಸು ಮತ್ತು ತಾಳಿಯನ್ನು ಕಿತ್ತುಕೊಂಡು ಬೈಕ್ ಹತ್ತಿ ಪರಾರಿಯಾಗಿದ್ದನು. ಆ ಸಂದರ್ಭದಲ್ಲಿ ಲಕ್ಷ್ಮಿ ಅವರ ಕುತ್ತಿಗೆಗೆ ತರಚಿದ ಗಾಯವಾಗಿತ್ತು. ಮಾಂಗಲ್ಯಸರ ಕಿತ್ತುಕೊಂಡು ಹೋದ ಬಗ್ಗೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ನಡೆಸುತ್ತಿದ್ದರು. ಮಾರ್ಚ್ 4ರಂದು ರಾತ್ರಿ 9 ಗಂಟೆಯಲ್ಲಿ ಪಿಎಸ್‍ಐ ಅರುಣ್‍ಕುಮಾರ್ ಸಿಬ್ಬಂದಿಯೊಂದಿಗೆ ಪೈಪ್‍ಲೈನ್ ರಸ್ತೆಯ ಗಾಣಿಗರಹಳ್ಳಿ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಪೊಲೀಸರನ್ನು ಕಂಡು ದ್ವಿಚಕ್ರ ವಾಹನ ತಿರುಗಿಸಿಕೊಂಡು ವಾಪಸ್ ಹೋಗುತ್ತಿದ್ದರು.

ತಕ್ಷಣ ಪೊಲೀಸರು ಅವರನ್ನು ಬೆನ್ನತ್ತಿ ಹಿಡಿದು ವಿಚಾರಣೆ ನಡೆಸಿದಾಗ ಸರಗಳ್ಳತನ ಮಾಡಲು ಬಂದಿರುವುದು ಗೊತ್ತಾಗಿದೆ. ಆರೋಪಿಗಳಾದ ಶಿವರಾಜ್ ಮತ್ತು ಪ್ರಸನ್ನರಾಜ್ ಪಲ್ಸರ್ ಬೈಕ್‍ನಲ್ಲಿ ಮತ್ತು ಪ್ರಕಾಶ್ ಆ್ಯಕ್ಟೀವ್ ಹೋಂಡಾದಲ್ಲಿ ಬರುತ್ತಿದ್ದರು. ಪ್ರಕಾಶ್ ಮೊದಲು ಎಲ್ಲ ಪ್ರದೇಶಗಳನ್ನು ಸುತ್ತಾಡಿ ಒಂಟಿಯಾಗಿ ಓಡಾಡುವ ಮಹಿಳೆಯರು ಮತ್ತು ಅವರು ಧರಿಸಿದ್ದ ಚಿನ್ನದ ಸರವನ್ನು ಗಮನಿಸಿಕೊಂಡು ಬಂದು ಶಿವರಾಜ್ ಮತ್ತು ಪ್ರಸನ್ನರಾಜ್‍ಗೆ ತಿಳಿಸುತ್ತಿದ್ದನು.

ಇವರಿಬ್ಬರು ಪಲ್ಸರ್ ಬೈಕ್‍ನಲ್ಲಿ ಹೋಗಿ ಸರಗಳ್ಳತನ ಮಾಡಿಕೊಂಡು ಬರುತ್ತಿದ್ದರು. ಈ ಮೂವರು ಕಳವು ಮಾಡಿದ ಚಿನ್ನದ ಸರವನ್ನು ಆರೋಪಿ ರತ್ನಾಗೆ ಕೊಡುತ್ತಿದ್ದರು. ಈಕೆ ಮಣಪ್ಪುರಂ ಗೋಲ್ಡ್ ಲೋನ್ ಕಂಪೆನಿ ಮತ್ತು ಸಣ್ಣಪುಟ್ಟ ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಹಣ ಪಡೆಯುತ್ತಿದ್ದಳು.

ನಂತರ ಅಡವಿಟ್ಟ ಚಿನ್ನಾಭರಣ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕರೆಮಾಡಿ ನೀವು ಬಿಡಿಸಿಕೊಟ್ಟರೆ ನಿಮ್ಮಲ್ಲಿ ಅಡವಿಡುತ್ತೇನೆ ಎಂದು ತಿಳಿಸಿ ಆ ಆಭರಣಗಳನ್ನು ಬಿಡಿಸಿಕೊಂಡು ಸದರಿ ಕಂಪೆನಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಆರೋಪಿ ಪ್ರಸನ್ನರಾಜ್ ಯಲಹಂಕ ಪೊಲೀಸ್ ಠಾಣೆಯ ದರೋಡೆಗೆ ಸಂಚು, ಯಶವಂತಪುರ, ಅಮೃತಹಳ್ಳಿ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು ಪ್ರಕರಣ, ಹಗಲು-ರಾತ್ರಿ ಕನ್ನಗಳವು ಪ್ರಕರಣದಲ್ಲಿ ಹಳೆ ಆರೋಪಿಯಾಗಿರುತ್ತಾನೆ.

ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ ಠಾಣೆಯ 4 ಪ್ರಕರಣ, ರಾಜಾನುಕುಂಟೆ, ಮಾದನಾಯಕನಹಳ್ಳಿ ಠಾಣೆಯ ತಲಾ ಒಂದೊಂದು ಪ್ರಕರಣ ಸೇರಿ 6 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.ಸೋಲದೇವನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಹರಿವರ್ಧನ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

Facebook Comments