“ಶಾಸನ ಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು ಪ್ರತಿನಿಸುವಂತಹ ಅವಕಾಶ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಶಾಸಕರ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಹಾಗೂ ಜಾಗೃತಿ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಸೌಲಭ್ಯ ಮತ್ತು ಸಮಾಜದ ಸಂಪತ್ತುಗಳು ಸಮಾನವಾಗಿ ದಕ್ಕುವಂತೆ ನೀತಿಗಳನ್ನು ರೂಪಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತಂದು ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವಂತೆ ಮಾಡಿದಾಗ ಮಾತ್ರ ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ ಎಂದರು.

ರಾಜಕೀಯ ಧುರೀಣರು, ಎಲ್ಲಾ ರಾಷ್ಟ್ರ, ರಾಜಕೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅತಿ ಹಿಂದುಳಿದ ವರ್ಗದವರಿಗೆ ಬೆಂಬಲ ನೀಡಿ, ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಸುಪ್ರೀಂ ಕೋರ್ಟ್‍ನಲ್ಲಿ ಈಗಾಗಲೇ 2009ರಲ್ಲಿ ಪ್ರಸ್ತಾಪಿಸಿದಂತೆ ಹೆಣ್ಣು ಮಕ್ಕಳು ಅಬಲರು. ಅವರನ್ನು ಸಬಲೀಕರಣಗೊಳಿಸುವ ಅವಶ್ಯವಿದೆ. ಯಾವುದೇ ಮತ ಅಥವಾ ಜಾತಿಯ ಜನರಾಗಲಿ, ಹಿಂದುಳಿದ ವರ್ಗದವರಾಗಲಿ, ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ಕಲ್ಪಿಸುವುದು ಅವಶ್ಯ ಎಂದು ತಿಳಿಸಿದರು.

ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು ಪ್ರತಿನಿಸುವಂತಹ ಅವಕಾಶ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಸುಪ್ರೀಂ ಕೋರ್ಟ್ ಈಗಾಗಲೇ ಬೊಮ್ಮಾಯಿ ಪ್ರಕರಣದಲ್ಲಿ 94ರಲ್ಲಿ ಹೇಳಿದಂತೆ ಹಾಗೂ 96ರಲ್ಲಿ ಮೊದಲಿಯಾರ್ ಐಡಲ್ ಕೇಸ್‍ನಲ್ಲಿ ಸೆಕ್ಷನ್ 14ರ ಅನುಚ್ಚೇದ -1956ರ ಪ್ರಕಾರ ನಾಗರಿಕ ಹಕ್ಕು, ಶಿಕ್ಷಣ ಹಕ್ಕು, ಸಾಂಸ್ಕøತಿಕ ಹಕ್ಕು, ಆರ್ಥಿಕ ಹಕ್ಕು ಹೆಣ್ಣು ಮಕ್ಕಳಿಗೆ ಸಲ್ಲಬೇಕಾಗಿದೆ. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದಿದೆ. ಇಂತಹ ತೀರ್ಪುಗಳು ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅನುಷ್ಠಾನಗೊಳ್ಳಬೇಕು. ಇಲ್ಲದಿದ್ದರೆ ದೇಶದ ಪ್ರಗತಿ ಕುಂಠಿತಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವ ಸಲಹೆಗಾರ ಸಿ.ಎಸ್. ದ್ವಾರಕಾನಾಥ್ ಮಾತನಾಡಿ, ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ನೀಡಬೇಕಾಗಿದೆ. ಏಕೆಂದರೆ, ಈ ಸಮುದಾಯಗಳಿಗೆ ಯಾವುದೇ ಮಠ-ಮಾನ್ಯಗಳಿಲ್ಲ. ಹೀಗಾಗಿ ಅತಿ ಹಿಂದುಳಿದ ವರ್ಗಗಳ ಪರವಾಗಿ ನಿಲ್ಲಬೇಕಾಗಿದೆ ಎಂದರು.

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ಮಾತನಾಡಿ, ಪ್ರವರ್ಗ-1ರಲ್ಲಿ 95 ಜಾತಿಗಳಿವೆ. ಪ್ರವರ್ಗ-2ಎನಲ್ಲಿ 102 ಜಾತಿಗಳಿವೆ. ಈ ಎರಡೂ ಸೇರಿ 197 ಜÁತಿಗಳಿವೆ. ಅತಿ ಹಿಂದುಳಿದ ವರ್ಗಗಳ ವೇದಿಕೆ ಎಂದು ಏಕೆ ಮಾಡಲಾಗಿದೆ ಎಂದರೆ ಯುಪಿ ಬಿಹಾರದಲ್ಲಿರುವ ಮೇಜರ್ ಸಮುದಾಯಗಳು ಹಿಂದುಳಿದ ವರ್ಗಗಳೇ ಆಗಿವೆ. ಇಲ್ಲೂ ಕೂಡ ಮೇಜರ್ ಸಮುದಾಯಗಳು ಹಿಂದುಳಿದ ವರ್ಗಗಳೇ ಆಗಿವೆ.

ಈ ಸಮುದಾಯಕ್ಕೆ ಒಂದು ಗುರುತಿನ ಅಸ್ಮಿತೆ ಬೇಕಲ್ಲವೇ? ನಮ್ಮ ಪಾಲನ್ನು ನಾವು ಪಡೆದುಕೊಳ್ಳುತ್ತಿದ್ದೇವಾ? ಕಳೆದ 40 ವರ್ಷಗಳಿಂದ ನಮ್ಮ ಪಾಲು ಎಷ್ಟರ ಮಟ್ಟಿಗೆ ಸಿಕ್ಕಿದೆ. 197 ಸಮುದಾಯಗಳಲ್ಲಿ ಕೇವಲ 23 ಸಮುದಾಯಗಳು ಮಾತ್ರವೇ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರಾತಿನಿಧ್ಯ ಪಡೆದಿವೆ. ಪ್ರವರ್ಗ-2ಎನ 102 ಸಮುದಾಯಗಳಲ್ಲಿ ಸುಮಾರು 27 ಸಮುದಾಯಗಳು ಮಾತ್ರ ಪ್ರಾತಿನಿಧ್ಯ ಪಡೆದಿವೆ. ಸುಮಾರು 70 ಸಮುದಾಯಗಳು ಇದುವರೆಗೆ ಒಂದು ಬಾರಿಯೂ ರಾಜಕೀಯ ಪ್ರಾತಿನಿಧ್ಯ ಪಡೆದಿಲ್ಲ. ಯಾವುದೇ ಅಧಿಕಾರ, ಶಿಕ್ಷಣದ ಸೌಲಭ್ಯಗಳನ್ನು ಪಡೆಯಲಾಗಿಲ್ಲ. ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ನೀಡಬೇಕಾಗಿದೆ ಎಂದರು.

ಈ ಸಮುದಾಯಗಳಿಗೆ ಯಾವುದೇ ಮಠ-ಮಾನ್ಯಗಳಿಲ್ಲ. ಮೆಡಿಕಲï, ಎಂಜಿನಿಯರಿಂಗ್ ಕಾಲೇಜುಗಳಿಲ್ಲ. ಹೇಳುವವರು ಕೇಳುವವರಿಲ್ಲ. ಇತ್ತೀಚೆಗಷ್ಟೇ ಧರ್ಮಗುರುಗಳು ಕಣ್ತೆರೆಯುತ್ತಿವೆ. ಆದರೆ, ಸರ್ಕಾರಗಳು ದೊಡ್ಡ ಸಮುದಾಯಗಳಿಗೆ 500 ಕೋಟಿಯಷ್ಟು ಅನುದಾನ ನೀಡಿದರೆ, ನಮ್ಮ ಧರ್ಮಗುರುಗಳಿಗೆ ಅಷ್ಟು ಅನುದಾನವನ್ನೂ ನೀಡುತ್ತಿಲ್ಲ. ಇದು ನೋವಿನ ಸಂಗತಿ ಎಂದರು.

ಸಂವಿಧಾನವನ್ನು ಅರ್ಪಿಸಿಕೊಂಡು 72 ವರ್ಷವಾದರೂ ನಮಗೆ ಈವರೆಗೆ ಯಾವುದೇ ಸವಲತ್ತು ಸಿಕ್ಕಿಲ್ಲ, ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಧ್ವನಿ ಎತ್ತಲೇಬೇಕು. ಹೋರಾಟವನ್ನೂ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು.

ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲï, ಗೌರವ ಸಲಹೆಗಾರರಾದ ಸಿ.ಎಸ್. ದ್ವಾರಕಾ ನಾಥ್, ಪಿ.ಎನ್.ಶ್ರೀನಿವಾಸಾಚಾರಿ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿ ಮಂಜುನಾಥ್ ಮತ್ತು ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಮಠಾೀಶರು ಮತ್ತಿತರರು ಉಪಸ್ಥಿತರಿದ್ದರು.

Facebook Comments