ಹಾಡುಹಗಲೇ, ನಡುರಸ್ತೆಯಲ್ಲೆ ಮಹಿಳೆ ಭೀಕರ ಹತ್ಯೆ , ಬೆಚ್ಚಿಬಿದ್ದ ಬೆಂಗಳೂರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.28- ನಡುರಸ್ತೆಯಲ್ಲೇ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಅಲೀಂ ಬೀಬಿ(35) ಕೊಲೆಯಾಗಿರುವ ಮಹಿಳೆ. ಈಕೆ ಕುಂದಲಹಳ್ಳಿ ಗ್ರಾಮದಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

ಈಕೆ ಮನೆಗೆಲಸ ಹಾಗೂ ಅಡುಗೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಅಲೀಂ ಬೀಬಿ ಬ್ರೂಕ್ ಫೀಲ್ಡ್ 2ನೇ ಹಂತ, ಐಟಿಪಿಎಲ್ ಮೈನ್ ರೋಡ್ ಟೆಕ್ ಪಾರ್ಕ್ ಬಳಿ ಮನೆಗೆಲಸಕ್ಕೆ ನಡೆದು ಹೋಗುತ್ತಿದ್ದರು. ಆಗ ರಫೀಕ್ ಎಂಬಾತ ನಡುರಸ್ತೆಯಲ್ಲೇ ಅವರನ್ನು ಅಡ್ಡಹಾಕಿ ಕುತ್ತಿಗೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಅವರು ಈ ಸಂಜೆಗೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಎಚ್‍ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ರಫೀಕ್‍ಗಾಗಿ ಬಲೆ ಬೀಸಿದ್ದಾರೆ. ಆರೋಪಿ ರಫೀಕ್ ಮತ್ತು ಅಲೀಂ ಬೀಬಿ ಪಶ್ಚಿಮ ಬಂಗಾಳದವರು. ಇಬ್ಬರು ಕುಂದಲಹಳ್ಳಿ ಗ್ರಾಮದಲ್ಲಿ ಅಕ್ಕಪಕ್ಕದ ನಿವಾಸಿಗಳು. ರಫೀಕ್ ಸೀರೆ ವ್ಯಾಪಾರಿಯಾಗಿದ್ದು, ಪಶ್ಚಿಮ ಬಂಗಾಳದಿಂದ ನಗರಕ್ಕೆ ಸೀರೆಗಳನ್ನು ತಂದು ವ್ಯಾಪಾರ ಮಾಡುತ್ತಿದ್ದ.

ರಫೀಕ್‍ನಿಂದ ಅಲೀಂ ಬೀಬಿ ಹತ್ತು ಸಾವಿರ ರೂ. ಸಾಲ ಪಡೆದಿದ್ದರು. ಈ ಸಾಲದ ವಿಚಾರವಾಗಿ ಇತ್ತೀಚೆಗೆ ಇಬ್ಬರಿಗೂ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ರಫೀಕ್‍ಗೆ ಅಲೀಂ ಬೀಬಿ ಚಪ್ಪಲಿಯಿಂದ ಹೊಡೆದಿದ್ದಳು. ಇದೇ ದ್ವೇಷದ ಹಿನ್ನೆಲೆಯಲ್ಲಿ ರಫೀಕ್, ಅಲೀಂ ಬೀಬಿ ಕೆಲಸಕ್ಕೆ ಹೋಗುತ್ತಿದ್ದಾಗ ಅಡ್ಡಹಾಕಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಡಿಸಿಪಿ ದೇವರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin