ಕ್ರಿಕೆಟ್ ದೇವರ ವಿಶ್ವಕಪ್ ದಾಖಲೆ ಪುಡಿಗಟ್ಟಲು ಬ್ಯಾಟಿಂಗ್ ದೈತ್ಯರು ಸಜ್ಜು..!

ಈ ಸುದ್ದಿಯನ್ನು ಶೇರ್ ಮಾಡಿ

# ಜಯಪ್ರಕಾಶ್

ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಹಲವು ದಾಖಲೆಗಳು ನಿರ್ಮಾಣವಾಗುತ್ತಿರುತ್ತಲೇ ಇರುತ್ತವೆ, ಆ ದಾಖಲೆಯನ್ನು ಮೀರಿ ನಿಲ್ಲುವ ಆಟಗಾರರು ವಿಶ್ವಕಪ್ ಎಂಬ ಜಾತ್ರೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ, ಆದರೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮಾಡಿರುವ 16 ವರ್ಷಗಳ ದಾಖಲೆಯನ್ನು ಇದುವರೆಗೂ ಯಾರೂ ಮುರಿಯದಿದ್ದರೂ ಈ ಬಾರಿ ಆ ದಾಖಲೆಯನ್ನು ಪುಡಿಗಟ್ಟುವ ಸೂಚನೆಗಳು ಸಿಕ್ಕಿವೆ.

2003ರ ವಿಶ್ವಕಪ್‍ನಲ್ಲಿ ಕ್ರಿಕೆಟ್‍ನ ವಾಮನಮೂರ್ತಿ ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟ್‍ನಿಂದ 6 ಅರ್ಧಶತಕ ಹಾಗೂ 1 ಶತಕದ ನೆರವಿನಿಂದ 673 ರನ್‍ಗಳನ್ನು ಗಳಿಸಿ ಭಾರತ ತಂಡವನ್ನು ಫೈನಲ್‍ಗೇರಿಸಿದ್ದರು.

ಸಚಿನ್ ಗಳಿಸಿದ 673 ರನ್‍ಗಳ ದಾಖಲೆಯನ್ನು ಪುಡಿಗಟ್ಟಲು ಈವರೆಗೂ ಯಾವ ಬ್ಯಾಟ್ಸ್‍ಮನ್‍ಗಳಿಗೂ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (659 ರನ್, 2007), ಶ್ರೀಲಂಕಾದ ಮಹೇಲ ಜಯವರ್ಧನೆ (548 ರನ್, 2007), ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ (547 ರನ್, 2015) ಅತಿ ಹೆಚ್ಚು ರನ್ ಗಳಿಸಿದ್ದರೂ ಸಚಿನ್ ಗಳಿಸಿದ 673ರನ್‍ಗಳ ದಾಖಲೆಗಳನ್ನು ಮೀರಿ ನಿಂತಿಲ್ಲ.

ಈ ಬಾರಿಯ ವಿಶ್ವಕಪ್‍ನಲ್ಲಿ ತಂಡಗಳು 500 ರನ್‍ಗಳನ್ನು ಗಳಿಸುವ ಸೂಚನೆ ನೀಡಿರುವುದರಿಂದ ಈ ಬಾರಿಯ ವಿಶ್ವಕಪ್‍ನಲ್ಲಿ ಆ ದಾಖಲೆಯನ್ನು ಸರಿಗಟ್ಟಬಹುದೇ ಎಂಬುದನ್ನು ಎದುರು ನೋಡಬೇಕಾಗಿದೆ.

2019ರ ವಿಶ್ವಕಪ್‍ನಲ್ಲಿ ಅಂತಹ ಸ್ಫೋಟಕ ಬ್ಯಾಟ್ಸ್‍ಮನ್‍ಗಳು ಇದ್ದಾರೆ. ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಂಗ್ಲೆಂಡ್‍ನ ಜೋನಿ ಬ್ಯಾರಿಸ್ಟೊವ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ವೆಸ್ಟ್‍ಇಂಡೀಸ್‍ನ ಕ್ರಿಸ್‍ಗೇಲ್ ಸಚಿನ್‍ರ ದಾಖಲೆಯನ್ನು ಮುರಿಯುವ ಹುಮ್ಮಸ್ಸಿನಲ್ಲಿದ್ದಾರೆ.

# ದಾಖಲೆ ನಿರ್ಮಿಸುವರೇ ವಿರಾಟ್ ಕೊಹ್ಲಿ..?
ಟೀಂ ಇಂಡಿಯಾದ ಸಾರಥ್ಯವನ್ನು ವಹಿಸಿರುವ ವಿರಾಟ್‍ಕೊಹ್ಲಿ 2011ರಲ್ಲಿ ವಿಶ್ವಕಪ್‍ಗೆ ಎಂಟ್ರಿ ಕೊಟ್ಟರು. ಆ ಋತುವಿನಲ್ಲಿ ಆಡಿದ 9 ಪಂದ್ಯಗಳಿಂದ 282 ರನ್ ಗಳಿಸಿದ್ದ ಕೊಹ್ಲಿ, ನಾಯಕತ್ವದ ವಹಿಸಿದ 2015ರ ಚೊಚ್ಚಲ ವಿಶ್ವಕಪ್‍ನಲ್ಲಿ 8 ಪಂದ್ಯಗಳಿಂದ 305 ರನ್‍ಗಳನ್ನು ಗಳಿಸಿದ್ದರು.

ಈಗ ವಿರಾಟ್ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು ಸತತ 2 ವರ್ಷಗಳೂ ಸಾವಿರ ರನ್‍ಗಳನ್ನು ಪೂರೈಸಿರುವುದು ಹಾಗೂ 2019ರಲ್ಲಿ ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 3 ಶತಕಗಳಿಂದ 611 ರನ್‍ಗಳನ್ನು ಗಳಿಸಿರುವುದನ್ನು ನೋಡಿದರೆ ಸಚಿನ್‍ರ ಹಲವು ದಾಖಲೆಗಳನ್ನು ಮುರಿದಿರುವ ಕೊಹ್ಲಿ 673 ರನ್‍ಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಮುಂದುವರೆಯುವುದೇ ಜಾನಿಯ ಐಪಿಎಲ್ ಅಬ್ಬರ: ಪ್ರಸಕ್ತ ಐಪಿಎಲ್‍ನಲ್ಲಿ ರನ್‍ಗಳ ಬಿರುಗಾಳಿ ಬೀಸಿರುವ ಇಂಗ್ಲೆಂಡ್‍ನ ಬ್ಯಾರಿಸ್ಟೊವ್ ಈಗ ತವರಿನಲ್ಲಿ ತಮ್ಮ ಬ್ಯಾಟಿಂಗ್ ವೈಭವವನ್ನು ಮೆರೆಯಲು ಸಜ್ಜಾಗಿದ್ದಾರೆ.

ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಕೇವಲ 93 ಎಸೆತಗಳಲ್ಲಿ 128 ರನ್ ಗಳಿಸಿರುವ ಪರಿಯನ್ನು ನೋಡಿದರೆ ಇವರು ಕೂಡ ವಾಮನಮೂರ್ತಿ (ಸಚಿನ್)ಯ ದಾಖಲೆಯನ್ನು ಅಳಿಸಿ ಹಾಕುವ ಸೂಚನೆ ನೀಡಿದ್ದಾರೆ. ಬ್ಯಾರಿಸ್ಟೋವ್ ಇದುವರೆಗೂ 6 ವಿಶ್ವಕಪ್ ಪಂದ್ಯಗಳಿಂದ 280 ರನ್‍ಗಳನ್ನು ಗಳಿಸಿದ್ದಾರೆ.

# ಮಿಂಚಲಿರುವ ವಾರ್ನರ್:
ಒಂದು ವರ್ಷ ಕ್ರಿಕೆಟ್‍ನಿಂದ ನಿಷೇಧಕ್ಕೊಳಗಾಗಿದ್ದರೂ ತಮ್ಮ ಬ್ಯಾಟಿಂಗ್ ಶಕ್ತಿ ಕುಂದಿಲ್ಲ ಎಂಬುದನ್ನು ಐಪಿಎಲ್‍ನಲ್ಲಿ ಸಾಬೀತುಪಡಿಸಿರುವ ಆಸ್ಟ್ರೇಲಿಯಾದ ಡೇವಿಡ್‍ವಾರ್ನರ್ ಈ ಬಾರಿಯೂ ಆಸ್ಟ್ರೇಲಿಯಾ ಮುಂಚೂಣಿ ಬ್ಯಾಟ್ಸ್‍ಮನ್ ಆಗಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್‍ನಲ್ಲಿ 12 ಪಂದ್ಯಗಳಿಂದ 1 ಶತಕ ಹಾಗೂ 8 ಅರ್ಧಶತಕ ಗಳಿಸುವ ಮೂಲಕ 692 ರನ್‍ಗಳನ್ನು ಗಳಿಸಿರುವ ಡೇವಿಡ್ ವಾರ್ನರ್ ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಇಂಗ್ಲೆಂಡ್‍ನ ಪಿಚ್‍ನಲ್ಲಿ ಬೌಂಡರಿ ಹಾಗೂ ಸಿಕ್ಸರ್‍ಗಳ ಸುರಿಮಳೆ ಸುರಿಸುವುದೇ ಅಲ್ಲದೆ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಾಗುವತ್ತ ಚಿತ್ತ ಹರಿಸಿದ್ದಾರೆ.

# ದಾಖಲೆ ಬರೆಯುತ್ತಾರಾ ಗೇಲ್..?
ಕ್ರಿಕೆಟ್ ಅಂಗಳದಲ್ಲಿ ನಿಂತರೆ ಎದುರಾಳಿ ಬೌಲರ್‍ಗಳ ಎದೆ ಬಡಿತವನ್ನು ಹೆಚ್ಚಿಸುವ ಕೆರಿಬಿಯನ್‍ನ ದೈತ್ಯನಿಗೆ ಇದು ಕೊನೆಯ ವಿಶ್ವಕಪ್ ಆಗಿದ್ದು, ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ 673 ರನ್‍ಗಳ ದಾಖಲೆಯನ್ನು ಮೀರುವತ್ತ ಗಮನ ಹರಿಸಿದ್ದಾರೆ.

ಸ್ವದೇಶದಲ್ಲಿ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 2 ಸೆಂಚುರಿ ಹಾಗೂ 2 ಅರ್ಧಶತಕ ಗಳಿಸಿ 4 ಪಂದ್ಯಗಳಲ್ಲೇ 424 ರನ್‍ಗಳನ್ನು ಚೆಚ್ಚಿರುವ ಗೇಲ್ ಐಪಿಎಲ್‍ನಲ್ಲಿ 13 ಪಂದ್ಯಗಳಿಂದ 490 ರನ್‍ಗಳನ್ನು ಗಳಿಸಿದ್ದು, ವಿಂಡೀಸ್‍ನ ಶ್ರೇಷ್ಠ ಬ್ಯಾಟ್ಸ್‍ಮನ್ ಎಂದು ಗುರುತಿಸಿಕೊಂಡಿರುವ ಗೇಲ್ 2019ರ ವಿಶ್ವಕಪ್‍ನಲ್ಲಿ 700 ರನ್‍ಗಳ ಗುರಿಯನ್ನು ಮುಟ್ಟುವ ಸೂಚನೆಯನ್ನು ನೀಡಿದ್ದಾರೆ.

# ರೋಹಿತ್ ಶರ್ಮಾರ ಮಿಂಚು:
ಐಪಿಎಲ್ ಚಾಂಪಿಯನ್ ನಾಯಕನಾಗಿರುವ ರೋಹಿತ್ ಶರ್ಮಾ, ಪ್ರಸಕ್ತ ವಿಶ್ವಕಪ್‍ನಲ್ಲಿ ಭಾರತ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದು ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ದೊಡ್ಡ ಮೊತ್ತದ ರನ್‍ಗಳ ಮಿಂಚು ಹರಿಸುವ ಹುಮ್ಮಸ್ಸಿನಲ್ಲಿದ್ದಾರೆ.

2017 ಹಾಗೂ 2018ರ ಕ್ಯಾಲೆಂಡರ್ ವರ್ಷಗಳಲ್ಲಿ 1000 ರನ್‍ಗಳ ಗಡಿ ದಾಟಿರುವ ರೋಹಿತ್, ಏಕದಿನದಲ್ಲೂ 2 ತ್ರಿಶತಕ ಗಳಿಸಿರುವುದನ್ನು ನೋಡಿದರೆ ಬ್ಯಾಟಿಂಗ್‍ಗೆ ಹೇಳಿ ಮಾಡಿಸಿದಂತಿರುವ ಆಂಗ್ಲರ ಪಿಚ್‍ನಲ್ಲಿ ರೋಹಿತ್‍ನ ಬ್ಯಾಟಿಂಗ್ ವೈಭವವನ್ನು ಕಾಣಲು ಪ್ರೇಕ್ಷಕರು ಕಾತರದಿಂದಿದ್ದಾರೆ.

2003ರಲ್ಲಿ ಕ್ರಿಕೆಟ್‍ನ ವಾಮನ ಮೂರ್ತಿಯ 673 ದಾಖಲೆಯನ್ನು ಪುಡಿಗಟ್ಟಲು ಮೇಲ್ಕಂಡ ಆಟಗಾರರಲ್ಲದೆ ಮತ್ತಷ್ಟು ಯುವ ಹಾಗೂ ಅನುಭವಿ ಆಟಗಾರರು ಸಜ್ಜಾಗಿದ್ದು ಆ ದಾಖಲೆಯನ್ನು ಸರಿಗಟ್ಟುವವರ್ಯಾರು ಎಂಬುದನ್ನು ನೋಡಲು 2019ರ ವಿಶ್ವಕಪ್ ಮುಗಿಯುವವರೆಗೂ ಕಾಯಲೇಬೇಕು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin