ಸೆಮಿಫೈನಲ್‍ನಲ್ಲಿವಿರಾಟ್ ಕೊಹ್ಲಿ- ಕೇನ್ ವಿಲಿಯಮ್ಸ್ ಬಿಗ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಬರ್ಮಿಂಗ್‍ಹ್ಯಾಮ್, ಜು.8- ಅಂಡರ್ 19 ವಿಶ್ವಕಪ್‍ನ ಸೆಮೀಸ್‍ನಲ್ಲಿ ಮುಖಾಮುಖಿ ಆಗಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ ಅವರು ಈಗ ಹಿರಿಯರ ಕ್ರಿಕೆಟ್‍ನ ನಾಯಕರಾಗಿ ವಿಶ್ವಕಪ್‍ನ ಫೈನಲ್‍ಗೇರಲು ಪೈಫೋಟಿ ನಡೆಸಲಿದ್ದಾರೆ.

2008ರಲ್ಲಿ ನಡೆದ ಸೆಮೀಸ್‍ನಲ್ಲಿ ನ್ಯೂಜಿಲೆಂಡ್‍ನ ನಾಯಕ ಕೇನ್ ವಿಲಿಯಮ್ಸ್ (37ರನ್)ರನ್ನು ಔಟ್ ಮಾಡಿ ಮಿಂಚಿದ ಕೊಹ್ಲಿ ನಂತರ ಬ್ಯಾಟಿಂಗ್‍ನಲ್ಲೂ 43 ರನ್ ಗಳಿಸಿ ಕೇನ್ ವಿಲಿಯಮ್ಸ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರೂ ತಂಡ 3 ವಿಕೆಟ್‍ಗಳಿಂದ ಭರ್ಜರಿ ಜಯ ಗಳಿಸಿ ನಂತರ ಫೈನಲ್ಸ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚಾಂಪಿಯನ್ಸ್ ಆಗಿದ್ದ ವಿರಾಟ್ ಕೊಹ್ಲಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಬ್ಯಾಕ್ ಕ್ಯಾಟ್ಸ್‍ಗಳ ಕಿವಿ ಹಿಂಡುವ ಮೂಲಕ ಸೆಮೀಸ್‍ನಲ್ಲಿ ಗೆದ್ದು ಫೈನಲ್ಸ್ ಪ್ರವೇಶಿಸಿ ವಿಶ್ವಚಾಂಪಿ ಯನ್ಸ್ ಆಗುವ ಹುಮ್ಮಸ್ಸಿ ನಲ್ಲಿದ್ದಾರೆ.

ಸೆಮೀಸ್ ಪಯಣ:
ವಿಶ್ವಕಪ್‍ನ ಸೆಮಿಫೈನಲ್ಸ್ ಅಂದರೆ ಅಲ್ಲಿ ಆಡುವ 4 ಘಟಾನುಘಟಿ ತಂಡಗಳ ಪೈಕಿ ಭಾರತ ಅಥವಾ ನ್ಯೂಜಿಲೆಂಡ್ ಇಲ್ಲವೇ ಎರಡು ತಂಡಗಳು ಇದ್ದೇ ಇರುತ್ತದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದರು. ಅದರಂತೆ 12 ವಿಶ್ವಕಪ್‍ಗಳ ಪೈಕಿ ನ್ಯೂಜಿಲೆಂಡ್ 8 ಬಾರಿ ಹಾಗೂ ಭಾರತ 7 ಬಾರಿ ಸೆಮೀಸ್‍ಗೇರಿವೆ.

ವಿಶ್ವಕಪ್‍ನ ಇತಿಹಾಸ ಗಮನಿಸಿದರೂ ಕೂಡ ನ್ಯೂಜಿಲೆಂಡ್ 8 ಬಾರಿ ಸೆಮೀಸ್ ತಲುಪಿದ್ದರೂ ಕೂಡ 2015 ರಲ್ಲಿ ಮಾತ್ರ ಫೈನಲ್ ಪ್ರವೇಶಿಸಿ ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿದ್ದರೆ, ಭಾರತ ತಂಡವು 1983 ಹಾಗೂ 2011ರ ವಿಶ್ವಕಪ್‍ನಲ್ಲಿ ಚಾಂಪಿಯನ್ಸ್ ಆಗಿ ಗೆದ್ದು ಬೀಗಿದರೆ, 2003ರಲ್ಲಿ ರನ್ನರ್ ಅಪ್ ಆದ ಸಾಧನೆಯನ್ನು ಹೊಂದಿದೆ.ವಿಶ್ವಕಪ್ ಇತಿಹಾಸದ ಸೆಮೀಸ್‍ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದರಿಂದ ಈ ಪಂದ್ಯವು ತೀವ್ರ ಕುತೂಹಲ ಮೂಡಿಸಿದೆ.

ಫೈನಲ್‍ಗೇರಲು ಭಾರತವೇ ಫೇವರೇಟ್: ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ಗೆಲುವು ಹಾಗೂ ಸೋಲಿನ ಅಂತರದ ನಡುವೆಯೇ ಗುದ್ದಾಡಿ ಸೆಮೀಸ್‍ಗೆ ಬಂದಿದ್ದರೆ, ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೋಲು ಕಂಡರೆ ಉಳಿದ ತಂಡಗಳ ವಿರುದ್ಧ ಗೆಲುವು ಗಳಿಸುವುದರಿಂದ ಭಾರತವೇ ಫೈನಲ್‍ಗೇರುವ ನೆಚ್ಚಿನ ತಂಡವಾಗಿದೆಯಾದರೂ ಚಂಚಲೆ ಆಗಿರುವ ವಿಜಯಲಕ್ಷ್ಮಿ ಯಾರತ್ತ ವಾಲುತ್ತಲೋ ನೋಡಬೇಕು.

ಬ್ಯಾಟಿಂಗ್ ಅಬ್ಬರ:
ಭಾರತ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳು ಘಟಾನುಘಟಿ ಬ್ಯಾಟ್ಸ್‍ಮನ್‍ಗಳಿದ್ದರೂ ಕೂಡ ಕೇನ್‍ವಿಲಿಯಮ್ಸ್ ಬಿಟ್ಟರೆ ಉಳಿದ ಬ್ಯಾಟ್ಸ್‍ಮನ್‍ಗಳಿಗೆ ನೈಜ ಬ್ಯಾಟಿಂಗ್ ಹೊರಹೊಮ್ಮದಿರುವುದು ಆ ತಂಡದ ಬ್ಯಾಟಿಂಗ್ ಬಲವನ್ನೇ ಕುಸಿದೆಯಾದರೂ ಸೆಮೀಸ್‍ನಲ್ಲಿ ಗುಪ್ಟಿಲ್, ಕೇನ್, ರಾಸ್ ಟೇಲರ್ ಅಬ್ಬರಿಸುವ ಸೂಚನೆಯನ್ನು ಅಲ್ಲಗಳೆಯುವಂತಿಲ್ಲ.

ಭಾರತ ತಂಡವು ಆರಂಭಿಕ ಆಟಗಾರ ಶಿಖರ್‍ಧವನ್‍ರನ್ನು ಕಳೆದುಕೊಂಡರೂ ಕೂಡ ಕೆ.ಎಲ್.ರಾಹುಲ್ ಹಗೂ ರೋಹಿತ್‍ಶರ್ಮಾರ ಆರಂಭಿಕ ಜೊತೆಯಾಟವೇ ತಂಡ ಬೃಹತ್ ಮೊತ್ತ ಗಳಿಸಲು ಸಹಕಾರಿಯಾಗಿದ್ದರೆ, 5 ಸೆಂಚುರಿಗಳನ್ನು ಗಳಿಸಿ ದಾಖಲೆ ನಿರ್ಮಿಸಿರುವ ರೋಹಿತ್ ಮತ್ತೊಮ್ಮೆ ಸೆಂಚುರಿ ಬಾರಿಸಲು ಸಜ್ಜಾಗಿದ್ದರೆ, ಟೂರ್ನಿಯಲ್ಲಿ ಒಂದು ಸೆಂಚುರಿ ಬಾರಿಸದ ವಿರಾಟ್ ಶತಕ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ, ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ರಾಹುಲ್ ಕೂಡ ಮತ್ತೊಂದು ಶತಕ ಗಳಿಸಲು ಅಣಿಯಾಗಿದ್ದರೆ, ರಿಷಭ್‍ಪಂತ್, ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಬ್ಯಾಟಿಂಗ್ ಬೆನ್ನೆಲುಬಾಗಿ ನ್ಯೂಜಿಲೆಂಡ್ ಬೌಲರ್‍ಗಳನ್ನು ಕಾಡಲಿದ್ದಾರೆ.

ವೇಗಿಗಳ ದರ್ಬಾರ್:
ಉತ್ತಮ ಬ್ಯಾಟ್ಸ್‍ಮನ್‍ಗಳಂತೆ ನುರಿತ ಬೌಲಿಂಗ್ ಪಡೆಯನ್ನು ಹೊಂದಿರುವ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳಲ್ಲಿ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಿ ವಿಕೆಟ್ ಕಬಳಿಸುವ ಚಾಲಾಕಿ ಬೌಲರ್‍ಗಳಾದ ಭುವನೇಶ್ವರ್ ಕುಮಾರ್ , ಜಸ್‍ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಟ್ರೆಂಟ್ ಬೋಲ್ಟ್, ಪಗ್ರ್ಯೂಸನ್, ಮ್ಯಾಟ್ ಹೆನ್ರಿ, ಟೀಮ್ ಸೌಥಿಯಂತಹ ಬೌಲರ್‍ಗಳು ಇದ್ದು ಸೆಮೀಸ್‍ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಒಟ್ಟಾರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠರಾಗಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಪೈಕಿ ಯಾರು ಫೈನಲ್‍ಗೇರುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments