ಉಬರ್ ನಿಂದ ವಿಶ್ವದ ಮೊದಲ ಟ್ಯಾಕ್ಸಿ ಸಬ್‍ಮರೀನ್ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

ಸಾರ್ವಜನಿಕರಿಗೆ ಟ್ಯಾಕ್ಸಿ ಸೇವೆ ಒದಗಿಸಿ ಜನಪ್ರಿಯವಾಗಿರುವ ಉಬೆರ್ ಈಗ ಮತ್ತೊಂದು ದಿಟ್ಟ ಮಾರ್ಗದಲ್ಲಿ ಮುನ್ನಡೆದಿದೆ.ಈ ಸಂಸ್ಥೆ ವಿಶ್ವದ ಪ್ರಪ್ರಥಮ ರೈಡ್‍ಶೇರ್ ಸಬ್‍ಮರೀನ್ ಯಾನ ಆರಂಭಿಸಿದೆ. ಸಮುದ್ರದಾಳದ ಈ ಸಾಗರ ಪಯಣ ರೋಚಕ..!

ಉಬೆರ್ ರೈಡ್ ಶೇರಿಂಗ್ ಕಂಪನಿಯು ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಅತ್ಯಂತ ಯಶಸ್ಸು ಕಂಡಿದೆ. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ಉಬೆರ್ ಟ್ಯಾಕ್ಸಿ ಸೇವೆ ಲಭ್ಯ. ಈ ಸಂಸ್ಥೆ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್ ರಾಜ್ಯದೊಂದಿಗೆ ಉಬೆರ್, ಸ್ಕೂಉಬೆರ್ ಎಂಬ ಯೋಜನೆಯನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಜಗತ್ಪ್ರಸಿದ್ಧ ಹವಳ ದ್ವೀಪ-ಗ್ರೇಟ್ ಬ್ಯಾರಿಯರ್ ರೀಫ್‍ನಲ್ಲಿ ವಿಶ್ವದ ಪ್ರಪ್ರಥಮ ರೈಡ್‍ಶೇರ್ ಸಬ್‍ಮರೀನ್ ಸೇವೆ ಆರಂಭಿಸಿದೆ. ಪ್ರಯಾಣಿಕರು ಜಲಾಂತರ್ಗಾಮಿಯಲ್ಲಿ ಯಾನ ಮಾಡಿ ಸಾಗರದಾಳದ ರೋಚಕ ದೃಶ್ಯಗಳನ್ನು ವೀಕ್ಷಿಸಬಹುದು.

ರೈಡ್‍ಶೇರ್ ಸಬ್‍ಮರೀನ್ ಯಾನಕ್ಕಾಗಿ ಪ್ರಯಾಣಿಕರು ಉಬೆರ್ ಆಪ್ ಮೂಲಕ ಬುಕ್ ಮಾಡಬೇಕು. ಅವರು ಇರುವ ಸ್ಥಳಕ್ಕೇ ಹೆಲಿಕ್ಟಾಪರ್ ಆಗಮಿಸಿ ಪ್ರಯಾಣಿಕರನ್ನು ಹೆರೋ ದ್ವೀಪಕ್ಕೆ ಕರೆದೊಯ್ಯುತ್ತದೆ. ಅಲ್ಲಿಂದ ಸಮುದ್ರದಾಳದಲ್ಲಿ ಸಬ್‍ಮರೀನ್ ಯಾನ ಶುರು.

ಹವಳ ದ್ವೀಪ ಸಮೂಹದ ಸಾಗರಗರ್ಭದಲ್ಲಿರುವ ಮತ್ಸ್ಯ ಸಂಕುಲಗಳು ಮತ್ತು ಹವಳ ಲೋಕದ ವಿಸ್ಮಯಗಳನ್ನು ಜಲಾಂತರ್ಗಾಮಿ ಒಳಗಿನಿಂದ ವೀಕ್ಷಿಸಬಹುದು.  ಜೂನ್ 18ರವರೆಗೆ ಪ್ರಾಯೋಗಿಕವಾಗಿ ಈ ಸೇವೆ ಲಭ್ಯ. ಇಬ್ಬರಿಗೆ ರೈಡ್‍ಶೇರ್ ಸಬ್‍ಮರೀನ್ ಯಾನಕ್ಕೆ 3,000 ಡಾಲರ್. ನಂತರದ ದಿನಗಳಲ್ಲಿ ಈ ಸೇವೆ ಪೂರ್ಣಪ್ರಮಾಣದಲ್ಲಿ ವಿಸ್ತರಣೆಯಾಗಲಿದೆ.

Facebook Comments