ವಿಶ್ವ ಪ್ಯಾರಾ-ಗೇಮ್ಸ್ : ಹೈಜಂಪರ್ ಶರದ್‍ಗೆ ಬೆಳ್ಳಿ, ಮರಿಯಪ್ಪನ್‍ಗೆ ಕಂಚು

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ನ.15-ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪ್ಯಾರಾ ಹೈಜಂಪರ್‍ಗಳಾದ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆದ್ದಿದ್ದಾರೆ. ಸಾಧನೆಯೊಂದಿಗೆ ಇವರಿಬ್ಬರೂ ಮುಂದಿನ ವರ್ಷ ನಡೆಯುವ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಎರಡು ಬಾರಿ ಏಷ್ಯನ್ ಪ್ಯಾರಾ ಗೇಮ್ಸ್ ಚಾಂಪಿಯನ್ ಆಗಿರುವ ಶರದ್ ಕುಮಾರ್ ಎತ್ತರ ಜಿಗಿತ ಸ್ಪರ್ಧೆಯಲ್ಲಿ 1.83 ಮೀಟರ್‍ಗಳ ಹೈ ಜಂಪ್ ಸಾಧನೆ ಮಾಡಿದ್ದು, ಇದು ಅವರ ಕ್ರೀಡಾ ಋತುವಿನಲ್ಲಿ ಅತ್ಯುತ್ತಮ ಸಾಧನೆ ಎನಿಸಿದೆ.

ಅದೇ ರೀತಿ ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ 1.80 ಮೀಟರ್ ಎತ್ತರದ ಜಿಗಿತದೊಂದಿಗೆ ಕಂಚು ಪದಕ ಕೊರಳಿಗೇರಿಸಿದರು. 1.86 ಮೀಟರ್ ಎತ್ತರದ ಜಿಗಿತ ಸಾಧನೆ ಮಾಡಿದ ಸ್ಯಾಮ್ ಗ್ರ್ಯೂವ್ ಬಂಗಾರದ ಪದಕಕ್ಕೆ ಮುತ್ತಿಟ್ಟರು.  ಈ ಸಂದರ್ಭದಲ್ಲಿ ಮಾತನಾಡಿದ ಶರದ್, ನನಗೆ ಈ ಸಾಧನೆ ವೈಯಕ್ತಿಕವಾಗಿ ತೃಪ್ತಿ ತಂದಿಲ್ಲ.

ನಾನು ಬಂಗಾರದ ಪದಕ ಗೆಲ್ಲಬೇಕೆಂದಿದ್ದೆ. ಆದರೆ ಇದು ನನಗೆ ನಿರಾಸೆ ಉಂಟು ಮಾಡಿದೆ. ನಾನು ಉಕ್ರೇನ್‍ನಲ್ಲಿ ಸತತ ತರಬೇತಿ ಪಡೆದಿದ್ದೆ. ನಾನು ಇನ್ನೂ ಉತ್ತಮ ಸಾಧನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

Facebook Comments