ವಿಶ್ವದಾದ್ಯಂತ ಕೊರೋನಾ ಮಾರಾಣಹೋಮ : 33,000 ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊರೊನಾಘಾತ : 33,000 ಜನ ಬಲಿ, 7.10 ಲಕ್ಷ ಮಂದಿಗೆ ಸೋಂಕು ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.30-ತೃತ್ರೀಯ ಮಹಾಯುದ್ಧದಂತೆ ಭಾರೀ ಆತಂಕಕ್ಕೆ ಕಾರಣವಾಗಿರುವ ಅಗೋಚರ ವೈರಿ ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವವೇ ತತ್ತರಿಸಿದೆ.

ಪ್ರಪಂಚದಾದ್ಯಂತ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಆಘಾತಕಾರಿ ಮಟ್ಟದಲ್ಲಿ ತೀವ್ರಗೊಂಡಿದ್ದು, ಈವರೆಗೆ 190ಕ್ಕೂ ಹೆಚ್ಚು ದೇಶಗಳಲ್ಲಿ 33,000 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆ 7.10 ಲಕ್ಷಕ್ಕೇರಿದೆ.

ಜಗತ್ತಿನ ಶಕ್ತಿಶಾಲಿ ದೇಶ ಅಮೆರಿಕವೇ ಕೊರೊನಾ ದಾಳಿಯಿಂದ ನಲುಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿದೆ. ಅಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಈಗಾಗಲೇ 1 ಲಕ್ಷ ದಾಟಿದೆ. ಗನಚುಂಬಿ ನಗರಿ ನ್ಯೂಯಾರ್ಕ್ ಅತಿಹೆಚ್ಚು ಬಾಧಿತರನ್ನು ಒಳಗೊಂಡ ಪ್ರದೇಶವಾಗಿದೆ. ಅಲ್ಲಿ ಈವರೆಗೆ 1,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಫ್, ಮುಂದಿನ ಎರಡು ವಾರಗಳಲ್ಲಿ ಅಮೆರಿಕದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಏಪ್ರಿಲ್ 30ರವರೆಗೂ ದೇಶದಲ್ಲಿ ಸಾಮಾಜಿಕ ಅಂತರದ ಮಾರ್ಗಸೂಚಿಯನ್ನು ವಿಸ್ತರಿಸಲು ಅವರು ಆದೇಶ ನೀಡಿದರು.

ಅಮೆರಿಕ ಅಧ್ಯಕ್ಷರು ಈಗಾಗಲೇ ಆರ್ಥಿಕ ರಕ್ಷಣಾ ಪ್ಯಾಕೇಜ್‍ಗಾಗಿ 2.2 ಲಕ್ಷ ಕೋಟಿ ಡಾಲರ್ ಮೊತ್ತದ ಯೋಜನೆಗೆ ಸಹಿ ಹಾಕಿದ್ದಾರೆ. ಜೂನ್ 1ರೊಳಗೆ ಎಲ್ಲವೂ ಸಹಜ ಸ್ಥಿತಿಗೆ ಮರುಳುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಕಿಲ್ಲರ್ ಕೊರೊನಾದಿಂದ ಘನಘೋರ ಪರಿಸ್ಥಿತಿ ಎದುರಿಸುತ್ತಿರುವ ಇಟಲಿಯಲ್ಲಿ ಮೃತಪಟ್ಟವರ ಸಂಖ್ಯೆ 10,500 ದಾಟಿದೆ.

ಸ್ಪೇನ್‍ನಲ್ಲಿ ಸತ್ತವರ ಸಂಖ್ಯೆ 5,000ಕ್ಕೇರಿದೆ. ಕೊರೊನಾ ವೈರಾಣು ಕೇಂದ್ರ ಬಿಂದುವಾದ ಚೀನಾದಲ್ಲಿ ಮತ್ತೆ ಇಂದು ನಾಲ್ವರು ಸಾವಿಗೀಡಾಗಿದ್ದಾರೆ. ಅಲ್ಲದೇ 31 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮಧ್ಯೆ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಸಿಂಗಪುರ್‍ನಲ್ಲಿ ಮೂವರು ಭಾರತೀಯರೂ ಸೇರಿದಂತೆ ಒಟ್ಟು 42 ಮಂದಿಯಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇನ್ನೂ ಹಲವು ದೇಶಗಳಲ್ಲಿಯೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Facebook Comments

Sri Raghav

Admin