ವಿಶ್ವದಲ್ಲಿ ಕೊರೊನಾರ್ಭಟ : 3.52 ಲಕ್ಷ ಸಾವು, 56.89 ಲಕ್ಷ ಮಂದಿ ಸೋಂಕಿತರು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ, ಮೇ 27- ಪೆಡಂಭೂತವಾಗಿ ಕಾಡುತ್ತಿರುವ ಡೆಡ್ಲಿ ಕೊರೊನಾ ವೈರಾಣು ದಾಳಿ ವಿಶ್ವಾದ್ಯಂತ ಮತ್ತಷ್ಟು ತೀವ್ರಗೊಂಡಿದ್ದು, ಮಹಾಮಾರಿಯ ಹಾವಳಿಯಿಂದ ಜಗತ್ತಿನ ಜನತೆ ರೋಸಿ ಹೋಗಿದ್ದಾರೆ.  ಈವರೆಗೆ ಪ್ರಪಂಚಾದ್ಯಂತ 3.52 ಲಕ್ಷ ಜನರನ್ನು ಹೆಮ್ಮಾರಿ ಬಲಿ ಪಡೆದಿದೆ. ಅಲ್ಲದೇ ಸೋಂಕಿತರ ಸಂಖ್ಯೆ 56.89 ಲಕ್ಷ ದಾಟಿರುವುದು ಆತಂಕಕಾರಿ ಸಂಗತಿಯಾಗಿದೆ.

ಕಳೆದ 24 ತಾಸುಗಳಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಮಂದಿಗೆ (ಸೋಂಕು ತಗುಲಿದೆ. ಕಳೆದ ಏಳು ದಿನಗಳಿಂದ ಜಗತ್ತಿನಾದ್ಯಂತ ಸರಾಸರಿ 1 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ದಿನ ನಿತ್ಯ ಪಾಸಿಟಿವ್ ಕೇಸ್‍ಗಳು ವ್ಯಾಪಕವಾಗಿ ಹೆಚ್ಚಾಗುತ್ತಿದೆ.  ಜಗತ್ತಿನಾದ್ಯಂತ ಈವರೆಗೆ 3,52,273 ಮಂದಿ ಸಾವಿಗೀಡಾಗಿದ್ದು, 56,88,516 ಸೋಂಕು ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕ ರೋಗ ಪೀಡಿತರಲ್ಲಿ ಸುಮಾರು 53,200ಕ್ಕೂ ಮಂದಿ ಸ್ಥಿತಿ ಗಂಭೀರವಾಗಿದ್ದು, ಮರಣ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಇಂದು ರಾತ್ರಿ ವೇಳೆಗೆ ಮೃತರ ಸಂಖ್ಯೆ 3.55 ಲಕ್ಷ ಮತ್ತು ಸೋಂಕಿತರ ಸಂಖ್ಯೆ 59 ಲಕ್ಷ ಮೀರುವ ಆತಂಕವಿದೆ. .  ಈ ಮಧ್ಯೆ, ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ ವೃದ್ದಿ ಕಂಡುಬಂದಿವೆ. 24,31,798 ಮಂದಿ ಸೋಂಕು ಪೀಡಿತರು ಚೇತರಿಸಿಕೊಂಡಿರುವುದು ಮತ್ತು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್, ಮತ್ತು ಇಂಗ್ಲೆಂಡ್ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ.ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಟರ್ಕಿ ಮತ್ತು ಭಾರತ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ಭಾರತದಲ್ಲಿ ಏರುತ್ತಿರುವ ಸೋಂಕು ಮತ್ತು ಸಾವಿನ ಸಂಖ್ಯೆ ಗಮನಿಸಿದರೆ ಶೀಘ್ರದಲ್ಲೇ ಏಳನೇ ಸ್ಥಾನಕ್ಕೇರುವ ಆತಂಕವಿದೆ.

ಮೆಕ್ಸಿಕೋದಲ್ಲಿ ಕೊರೊನಾ ಆರ್ಭಟ ತೀವ್ರಗೊಂಡಿದ್ದು ಪ್ರತಿದಿನ ಸರಾಸರಿ 500 ಮಂದಿ ಸಾವಿಗೀಡಾಗುತ್ತಿದ್ಧಾರೆ.  ಏಷ್ಯಾ ಖಂಡದಲ್ಲಿ ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ಕಂಡುಬರುತ್ತಿವೆ.

Facebook Comments