ಕೊರೊನಾ ಹುಟ್ಟೂರು ವುಹಾನ್‍ನಲ್ಲಿ ಮತ್ತೆ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ವುಹಾನ್/ಸಿಯೋಲ್, ಮೇ 15- ಲಾಕ್‍ಡೌನ್ ಸಡಿಲಿಕೆ ಬೆನ್ನಲ್ಲೇ ವಿಶ್ವದ ವಿವಿಧೆಡೆ ಕಿಲ್ಲರ್ ಕೊರೊನಾ ವೈರಸ್ ಆರ್ಭಟದ ಎರಡನೆ ಅಲೆ ಉಲ್ಭಣಗೊಳ್ಳುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಮರು ದಿನವೇ ಭಾರೀ ಗಂಡಾಂತರ ಎದುರಾಗಿದೆ.

ಇಡೀ ವಿಶ್ವದಲ್ಲಿ ವ್ಯಾಪಕ ಸಾವು ಮತ್ತು ಸೋಂಕಿಗೆ ಕಾರಣವಾದ ಕೊರೊನಾ ವೈರಸ್ ಹುಟ್ಟೂರು ಚೀನಾದ ವುಹಾನ್ ನಗರಿಯಲ್ಲಿ ಮತ್ತೆ ಹೆಮ್ಮಾರಿಯ ಆರ್ಭಟ ಶುರುವಾಗಿದ್ದು, ಎರಡನೆ ಹಂತದ ದಾಳಿ ಆರಂಭವಾಗಿದೆ.ವುಹಾನ್‍ನಲ್ಲಿ ಈಗಾಗಲೇ ಅನೇಕರಿಗೆ ಸೋಂಕು ತಗುಲಿದ್ದು , ಮತ್ತೆ ಮಹಾ ಮಾರಿಯ ಹಾವಳಿಯ ಗಂಡಾಂತರ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ವುಹಾನ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ 10 ದಿನಗಳ ಕಾಲ ಲಾಕ್‍ಡೌನ್ ಘೋಷಿಸಲಾಗಿದ್ದು, ಆ ನಗರದ 1.10 ಕೋಟಿ ಜನಸಂಖ್ಯೆಗೆ ಕೋವಿಡ್-19 ವೈರಸ್ ಸೋಂಕು ಪರೀಕ್ಷೆ ಕಾರ್ಯ ಇಂದಿನಿಂದ ಆರಂಭವಾಗಿದೆ.

ಮತ್ತೆ ಚೀನಾದ್ಯಂತ ಕೊರೊನಾ ಆರ್ಭಟದ ಎರಡನೆ ಅಲೆ ಉಲ್ಬಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಮಳೆಗಾಲ ಸಮೀಪದಲ್ಲಿದ್ದು , ವೈರಸ್ ಸಂಖ್ಯೆ ದ್ವಿಗುಣಗೊಳ್ಳುವ ಆಘಾತವೂ ಎದುರಾಗಿದೆ.

# ದಕ್ಷಿಣ ಕೊರಿಯಾದಲ್ಲೂ ಎರಡನೆ ಅಲೆ:
ಕೊರೊನಾ ವೈರಸ್ ಹಾವಳಿಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಿದ ದಕ್ಷಿಣ ಕೊರಿಯಾದಲ್ಲೂ ಎರಡನೆ ಹಂತದ ವೈರಾಣು ಆಕ್ರಮಣ ಎದುರಾಗಿದೆ. ರಾಜಧಾನಿ ಸಿಯೋಲ್ ಸೇರಿದಂತೆ ಅನೇಕ ನಗರಗಳಲ್ಲಿ ಲಾಕ್‍ಡೌನ್ ತೆರವುಗೊಳಿಸಿ ನೈಟ್ ಕ್ಲಬ್ , ಡಿಸ್ಕೋ ಥೆಕ್, ಬಾರ್ ಅಂಡ್ ರೆಸ್ಟೋರೆಂಟ್‍ಗೆ ಮುಕ್ತ ಅವಕಾಶ ನೀಡಿದ ಬೆನ್ನಲ್ಲೇ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ.

ಸಿಯೋಲ್‍ನ ಪ್ರತಿಷ್ಟಿತ ನೈಟ್ ಕ್ಲಬ್‍ವೊಂದರ 100ಕ್ಕೂ ಹೆಚ್ಚು ಕೊರಿಯನ್ನರಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ರಾಜಧಾನಿ ಸೇರಿದಂತೆ ಕೆಲವು ನಗರಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಕೊರೊನಾ ವೈರಸ್‍ನ ಎರಡನೆ ಅಲೆಯ ಆಕ್ರಮಣ ತಡೆಗಟ್ಟಲು ಹರಸಾಹಸ ಮಾಡಲಾಗುತ್ತಿದೆ.

Facebook Comments

Sri Raghav

Admin