ಯುದ್ದೋನ್ಮಾದದ ನಡುವೆಯೇ 3 ಬಾರಿ ಭೇಟಿಯಾಗಲಿದ್ದಾರೆ ಮೋದಿ-ಜಿನ್‍ಪಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.2- ಇದೇ ತಿಂಗಳಿನಲ್ಲಿ ಮೂರು ಜಾಗತಿಕ ಶೃಂಗಸಭೆಗಳು ನಡೆಯಲಿದ್ದು, ಈ ಮೂರು ಶೃಂಗಸಭೆಗಳಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಭಾಗವಹಿಸಲಿದ್ದು , ಉಭಯ ದೇಶಗಳ ಪ್ರಸ್ತುತ ಸಂಘರ್ಷ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ನಾಯಕರ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ಪೂರ್ವ ಲಡಾಕ್‍ನ ಗಡಿಯಲ್ಲಿ ಇಂಡೋ ಚೀನಾ ನಡುವೆ ಯುದ್ಧದ ವಾತಾವರಣ ಮತ್ತು ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ರೈಲು ಸಂಪರ್ಕ ಯೋಜನೆಗೆ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ಮೋದಿ-ಜಿಂಗ್ ಪಿಂಗ್ ಭೇಟಿ ಕುತೂಹಲ ಕೆರಳಿಸಿದೆ.

ಈ ಮೂರು ಶೃಂಗಸಭೆಗಳಲ್ಲಿ ಪ್ರಧಾನಿಯವರು ಈ ವಿಷಯಗಳನ್ನು ಪ್ರಸ್ತಾಪಿಸಿ ಚೀನಾ ಮೇಲೆ ಒತ್ತಡ ಹೇರುವ ನಿರೀಕ್ಷೆ ಇದೆ. ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ಈ ಮೂರು ಶೃಂಗಸಭೆಗಳ ವರ್ಚುವಲ್ ಸಭೆಗಳಾಗಿರಲಿದ್ದು, ವಿಡಿಯೋ ಕಾನ್ಫರೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಲಿದ್ದಾರೆ.

ಇದೇ ನ.10ರಂದು ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ ನಡೆಯಲಿದ್ದು, ನ.17ರಿಂದ ಬ್ರಿಕ್ಸ್ ಸಭೆ ಆರಂಭವಾಗಲಿದೆ. ಅಂತೆಯೇ ನ.21 ಮತ್ತು ನ.22ರಂದು ಜಿ 20 ಶೃಂಗಸಭೆ ನಡೆಯಲಿದೆ. ಜಿ20 ಶೃಂಗಸಭೆಯನ್ನು ಸೌದಿ ಅರೇಬಿಯಾ ಆಯೋಜನೆ ಮಾಡಲಿದ್ದು, ಬ್ರಿಕ್ಸ್ ಮತ್ತು ಎಸ್ ಸಿಒ (ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ)ಯ ಆಯೋಜನೆ ಜವಾಬ್ದಾರಿಯನ್ನು ರಷ್ಯಾ ಹೊಂದಿದೆ.

ಲಡಾಖ್ ಸಂಘರ್ಷ ಮತ್ತು ಎಲ್‍ಎಸಿ ಕಾರ್ಯಾಚರಣೆಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪರಸ್ಪರ ಭೇಟಿಯಾಗತ್ತಿದ್ದಾರೆ.  ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರು ಸಂಘರ್ಷದಲ್ಲಿ ಮೃತರಾದ ಬಳಿಕ ಉಭಯ ದೇಶಗಳ ನಡುವಿನ ಸಹಕಾರ ಮತ್ತು ಸೌಹಾರ್ಧ ಸಂಬಂಧ ಹಳಿ ತಪ್ಪಿದ್ದು, ಇದನ್ನು ಮತ್ತೆ ಟ್ರಾಕ್ ಗೆ ತರುವ ನಿಟ್ಟಿನಲ್ಲಿ ಈ ಮೂರು ಸಭೆಗಳು ಉಭಯ ದೇಶಗಳಿಗೆ ಮಹತ್ವದ್ದಾಗಿದೆ.

ಒಟ್ಟಾರೆ ಈ ಮೂರು ಶೃಂಗಸಭೆಗಳ ಗಹನ ಚರ್ಚೆ ಮತ್ತು ಫಲಶೃತಿಗಳು ಕುತೂಹಲ ಕೆರಳಿಸಿದ್ದು ಮುಂದಿನ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

Facebook Comments