ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಅ.27- ಮಾಜಿ ಸಚಿವ ಡಾ.ವೈ.ನಾಗಪ್ಪ (87) ಇಂದು ಬೆಳಗ್ಗೆ 8.02 ಕ್ಕೆ ನಿಧನರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ನಾಗಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಒಬ್ಬ ಪುತ್ರ ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಇಂದು ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ.

ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ 1989, 1999 ಹಾಗೂ 2004 ಸೇರಿದಂತೆ ಒಟ್ಟು ಮೂರು ಬಾರಿ ಶಾಸಕರಾಗಿದ್ದ ಅವರು, 2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಧರ್ಮಸಿಂಗ್ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2008 ರಲ್ಲಿ ಮತ್ತೆ ಹರಿಹರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. ನಂತರ ಬದಲಾದ ರಾಜಕೀಯದಿಂದ ಮತ್ತು ಅನಾರೋಗ್ಯದಿಂದ ರಾಜಕಾರಣದಿಂದ ತೆರೆಮರೆಗೆ ಸರಿದ ನಾಗಪ್ಪ ಅವರು ಹರಿಹರ ತಾಲೂಕಿನಲ್ಲಿ ಶೋಷಿತ ಜನಾಂಗಗಳ ನಾಯಕರಾಗಿ ಧ್ವನಿಯಾಗಿದ್ದರು.

ನಾಗಪ್ಪನವರ ರಾಜಕಾರಣಕ್ಕೆ ಬಂದಿದ್ದು ಒಂದು ಆಕಸ್ಮಿಕ. 1980ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಆಗ ಶಾಸಕರಾಗಿದ್ದ ಹೆಚ್.ಶಿವಪ್ಪ ಇವರನ್ನು ಪದೇ ಪದೇ ವರ್ಗಾವಣೆ ಮಾಡಿಸಿದಾಗ ಇದಕ್ಕೆ ಬೇಸತ್ತು ಹಾಲಿ ಶಾಸಕನಿಗೆ ಸೆಡ್ಡು ಹೊಡೆದು ನೀನು ಮನಸ್ಸು ಮಾಡಿದರೆ ಡಾಕ್ಟರ್ ಆಗೋದಕ್ಕೆ ಆಗಲ್ಲ.

ಆದರೆ, ನಾನು ಮನಸ್ಸು ಮಾಡಿದರೆ ಎಂಎಲಎ ಆಗುತ್ತೇನೆ ಎಂದು ರಾಜಕಾರಣಕ್ಕೆ ಧುಮುಕಿ ಅದೇ ಹೆಚ್.ಶಿವಪ್ಪ ವಿರುದ್ಧ ಮೂರು ಬಾರಿ ಶಾಸಕರಾಗಿ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. ಹರಿಹರ ವಿಧಾನ ಸಭಾ ಕ್ಷೇತ್ರದ ಅಭಿವೃದ್ದಿ ಪರ್ವದೊಂದಿಗೆ ಶೋಷಿತ ತುಳಿತಕ್ಕೆ ಒಳಗಾದ ಜನರ ಮತ್ತು ಅಲ್ಪಸಂಖ್ಯಾತರ ಮನಸ್ಸುಲ್ಲಿ ಹಚ್ಚಾಗಿ ಉಳಿದಿದ್ದಾರೆ.

Facebook Comments