ಪ್ರತಿಯೊಬ್ಬರ ಅಕೌಂಟ್‍ಗೆ ದುಡ್ಡು ಹಾಕ್ತಿನಿ ಅಂತ ಮೋದಿ ಯಾವತ್ತೂ ಹೇಳಿಲ್ಲ : ಬಿಎಸ್‍ವೈ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa
ಬೆಂಗಳೂರು, ಜೂ.24- ಪ್ರತಿಯೊಬ್ಬರ ಅಕೌಂಟ್‍ಗೆ ದುಡ್ಡು ಹಾಕುತ್ತೇನೆ ಎಂದು ಪ್ರಧಾನಿಯವರು ಎಲ್ಲೂ ಹೇಳಿಲ್ಲ ಎಂದು ಮಾಧ್ಯಮದವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗರಂ ಆದರು. ನಗರದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕುರಿತ ಕಿರು ಪುಸ್ತಕ ಬಿಡುಗಡೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಕೇಳಿದ ಪ್ರಶ್ನೆಗೆ ನೀವು ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ರೀತಿ ಮಾತನಾಡಬೇಡಿ. ಅವರು ಪ್ರತಿಯೊಬ್ಬರ ಅಕೌಂಟ್‍ಗೆ ದುಡ್ಡು ಹಾಕುತ್ತೇನೆಂದು ಎಲ್ಲೂ ಹೇಳಿಲ್ಲ ಎಂದು ಕಿಡಿಕಾರಿದರು.

ನಾನು ಡಿಕೆಶಿ ಅವರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಹತ್ತಿರ ಏನು ಡೈರಿಗಳಿವೆಯೋ ಅವನ್ನು ಮೊದಲು ಬಿಡುಗಡೆ ಮಾಡಿ ಎಂದ ಅವರು, ನಿಮ್ಮ ಹತ್ತಿರ ಸಿಐಡಿ, ಎಸಿಬಿ ಇದೆ ತನಿಖೆ ಮಾಡಿಸಿ ಎಂದು ಹೇಳಿದರು. ನಾವು ಯಾವುದನ್ನೂ ಕಲ್ಪನೆ ಮಾಡಿಕೊಳ್ಳುವುದಿಲ್ಲ. ನೀವು ಹೇಳಿರುವಂತೆ ನಿಮ್ಮ ಹತ್ತಿರ ಇರುವ ಡೈರಿಗಳನ್ನು ಬಿಡುಗಡೆ ಮಾಡಿ ಎಂದರು.

ಇದೇ 29ಕ್ಕೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿ ಎಲ್ಲ ವಿಚಾರಗಳ ಚರ್ಚೆಯಾಗಲಿದೆ. ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನದ ಕುರಿತಂತೆಯೂ ಚರ್ಚೆ ನಡೆಯಲಿದ್ದು, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಬಿ.ಜಿ.ಪುಟ್ಟಸ್ವಾಮಿ ಅವರು ಬೇಸರದಿಂದ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ಅವರೊಂದಿಗೂ ಮಾತನಾಡುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು. ಕಾರ್ಯಕಾರಿಣಿಯಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.

Facebook Comments

Sri Raghav

Admin