ರೆಸಾರ್ಟ್‌ನಿಂದ ಹೊರಹೋದ ಶಾಸಕರು ಕೂಡಲೇ ವಾಪಸ್ ಬರುವಂತೆ ಬಿಎಸ್ವೈ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20-ರೆಸಾರ್ಟ್ ಬಿಟ್ಟು ಹೊರ ಹೋಗಿರುವ ಶಾಸಕರು ಕೂಡಲೇ ವಾಪಸ್ ಹಿಂತಿರುಗುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಲ್ಲಾ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೆಲ ಶಾಸಕರು ಕುಟುಂಬ ಸದಸ್ಯರನ್ನು ನೋಡಲು ಹಾಗೂ ಇನ್ನು ಕೆಲವರು ಕ್ಷೇತ್ರದಲ್ಲಿ ಪೂರ್ವ ನಿಗದಿತ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಳೆದ ರಾತ್ರಿ ತೆರಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯಡಿಯೂರಪ್ಪ, ಯಾವೊಬ್ಬ ಶಾಸಕರು ರೆಸಾರ್ಟ್ ಬಿಟ್ಟು ಕದಲಬಾರದು.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಸ್ತಾವನೆಗೆ ಇತಿಶ್ರೀ ಹಾಡುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದೊಂದು ಮತವೂ ಕೂಡ ನಿರ್ಣಾಯಕವಾಗುತ್ತದೆ. ಯಾರೇ ಹೊರ ಹೋಗಿದ್ದರೂ ಕೂಡಲೇ ರೆಸಾರ್ಟ್‍ಗೆ ಹಿಂತಿರುಗಬೇಕೆಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಯಾರೊಬ್ಬರೂ ರೆಸಾರ್ಟ್‍ನಿಂದ ಹೊರ ಹೋಗಬಾರದೆಂದು ಮೊದಲೇ ಸೂಚನೆ ಕೊಡಲಾಗಿತ್ತು. ಮುಖ್ಯ ಸಚೇತಕರಿಗೂ ಮಾಹಿತಿ ನೀಡಲಾಗಿದೆ. ಪೂರ್ವ ನಿಗದಿತ ಕಾರ್ಯಕ್ರಮಗಳು ಇದ್ದರೂ ಮುಂದೂಡಬೇಕಿತ್ತು. ಅಷ್ಟು ಆತುರವಾಗಿ ಹೋಗಬೇಕಾದ ಅಗತ್ಯವಾದರೂ ಏನಿತ್ತು ಎಂದು ಬಿಎಸ್‍ವೈ ಸಿಡಿಮಿಡಿಗೊಂಡಿದ್ದಾರೆ.

ಕೂಡಲೇ ಪಕ್ಷದ ಮುಖ್ಯ ಸಚೇತಕ ಸುನೀಲ್‍ಕುಮಾರ್ ಅವರನ್ನು ಸಂಪರ್ಕಿಸಿದ ಯಡಿಯೂರಪ್ಪ ಹೊರ ಹೋಗಿರುವ ಶಾಸಕರನ್ನು ಮಧ್ಯಾಹ್ನದೊಳಗೆ ರೆಸಾರ್ಟ್‍ಗೆ ಕರೆತರಲು ಸೂಚಿಸಿದರು.

ಸದ್ಯಕ್ಕೆ ಯಲಹಂಕದ ರಮಡ ರೆಸಾರ್ಟ್‍ನಲ್ಲಿ 70ಕ್ಕೂ ಹೆಚ್ಚು ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗುತ್ತಿದೆ. ಹಿರಿಯ ಶಾಸಕರು ಹಾಗೂ ಬೆಂಗಳೂರಿನ ಕೆಲ ಶಾಸಕರು ಕಳೆದ ರಾತ್ರಿ ವಿಧಾನಸೌಧದಿಂದ ರೆಸಾರ್ಟ್‍ಗೆ ಹೋಗದೆ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು.

ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದು, ಅಂದು ಪಕ್ಷಗಳ ಬಲಾಬಲ ತಿಳಿಯಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin