ಕೇಂದ್ರ ಸಂಪುಟದಲ್ಲಿ ರಾಜ್ಯಕೋಟಾ ಕುರಿತು ಚರ್ಚಿಸಲು ಬುಧವಾರ ಬಿಎಸ್‍ವೈ ದೆಹಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಇದೇ 30ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರಾಜ್ಯದಿಂದ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ವರಿಷ್ಠರ ಜೊತೆ ಚರ್ಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಬುಧವಾರ ನವದೆಹಲಿಗೆ ತೆರಳಲಿದ್ದಾರೆ.

ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಕನಿಷ್ಠ ಮೂರು ಸಂಪುಟ ದರ್ಜೆ ಹಾಗೂ ನಾಲ್ಕು ರಾಜ್ಯ ಖಾತೆಗಳನ್ನು ನೀಡುವಂತೆ ವರಿಷ್ಠರಿಗೆ ಪಟ್ಟಿ ನೀಡಲಿದ್ದಾರೆ.

28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದು ದಾಖಲೆಯನ್ನು ನಿರ್ಮಿಸಿದೆ. ಹೀಗಾಗಿ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಿರಿಯರು ಮತ್ತು ಕಿರಿಯರನ್ನೊಳಗೊಂಡ ಸಂಸದರುಗಳನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಲಿದ್ದಾರೆ.

ಸಂಪುಟಕ್ಕೆ ತೆಗೆದುಕೊಳ್ಳುವ ಆಕಾಂಕ್ಷಿಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಎರಡು ದಿನಗಳ ಹಿಂದೆಯೇ ಕೇಂದ್ರ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದರು. ರಾಜ್ಯಸಭಾ ಕೋಟಾದಲ್ಲಿ ನಿರ್ಮಲಾ ಸೀತಾರಾಮನ್ ಈ ಹಿಂದೆ ರಕ್ಷಣಾ ಸಚಿವರಾಗಿದ್ದರು. ಇದೀಗ ರಚನೆಯಾಗಲಿರುವ ಸಂಪುಟದಲ್ಲಿ ಪುನಃ ಅವರಿಗೆ ಅತ್ಯಂತ ಪ್ರಬಲ ಖಾತೆ ಸಿಗುವ ಸಂಭವವಿದೆ.

ಈ ಬಾರಿ ಅಮಿತ್ ಷಾ ಸಂಪುಟಕ್ಕೆ ಸೇರ್ಪಡೆಯಾದರೆ ಗೃಹ ಖಾತೆ ಇಲ್ಲವೆ ರಕ್ಷಣಾ ಖಾತೆ ಸಿಗುವ ನಿರೀಕ್ಷೆ ಇದೆ. ಆ ವೇಳೆ ನಿರ್ಮಲ ಸೀತಾರಾಮನ್, ಸುಷ್ಮಾ ಸ್ವರಾಜ್ ನಿರ್ವಹಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವರಾಗುವ ಸಾಧ್ಯತೆ ಇದೆ.

ಈಗಾಗಲೇ ಯಡಿಯೂರಪ್ಪ ಕೇಂದ್ರ ನಾಯಕರಿಗೆ ನೀಡಿರುವ ಪಟ್ಟಿಯಲ್ಲಿ ಒಕ್ಕಲಿಗ ಕೋಟಾದಿಂದ ಬೆಂಗಳೂರು ಉತ್ತರದಲ್ಲಿ ಗೆದ್ದಿರುವ ಡಿ.ವಿ.ಸದಾನಂದಗೌಡ, ಪರಿಶಿಷ್ಟ ಜಾತಿ, ಸಮುದಾಯದಿಂದ ರಮೇಶ್ ಜಿಗಜಿಣಗಿ, ವಿ.ಶ್ರೀನಿವಾಸ್ ಪ್ರಸಾದ್, ಲಿಂಗಾಯಿತ ಸಮುದಾಯದಿಂದ ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ ಗದ್ದಿಗೌಡರ್, ಬ್ರಾಹ್ಮಣ ಕೋಟಾದಲ್ಲಿ ಅನಂತಕುಮಾರ್ ಹೆಗಡೆ, ಪ್ರಹ್ಲಾದ್ ಜೋಷಿ ಹೆಸರುಗಳು ರವಾನೆಯಾಗಿದೆ.

29ರಂದು ಪಕ್ಷದ ಪ್ರಮುಖರ ಜೊತೆ ನವದೆಹಲಿಗೆ ತೆರಳಿ ರಾಜ್ಯಕ್ಕೆ ಇಂತಿಷ್ಟೇ ಸಂಖ್ಯೆಯ ಸಚಿವರನ್ನು ತೆಗೆದುಕೊಳ್ಳುವಂತೆ ಮನವೊಲಿಸುವ ಸಂಭವವಿದೆ. ಕೊನೆ ಕ್ಷಣದಲ್ಲಿ ಮಹಿಳಾ ಕೋಟಾದಿಂದ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸಂಪುಟಕ್ಕೆ ಸೇರ್ಪಡೆಯಾದರೂ ಅಚ್ಚರಿ ಇಲ್ಲ.

Facebook Comments

Sri Raghav

Admin