ರಾಮನಗರದಲ್ಲಿ ಚಂದ್ರಶೇಖರ್ ಅವರನ್ನು ಡಿಕೆಶಿ ಹಣ ಕೊಟ್ಟು ಖರೀದಿಸಿದ್ದಾರೆ : ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar-Yaddyurappa
ಶಿವಮೊಗ್ಗ,ನ.1-ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಅಭ್ಯರ್ಥಿ ಎಂ.ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ನಾಯಕರು ಹಣ ಕೊಟ್ಟು ಖರೀದಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್ ಅವರಿಗೆ ಬ್ಲಾಕ್‍ಮೇಲ್ ಹಾಗೂ ಹಣದ ಆಮಿಷವೊಡ್ಡಿ ಖರೀದಿ ಮಾಡಿದ್ದಾರೆ. ಇದರ ಸತ್ಯಾಂಶ ಸದ್ಯದಲ್ಲೇ ಗೊತ್ತಾಗಲಿದೆ ಎಂದು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್ ಹಣದ ಆಮಿಷಕ್ಕೆ ಚಂದ್ರಶೇಖರ್ ಬಲಿಯಾಗಿದ್ದಾರೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದಷ್ಟೇ ಹೇಳಿ ಮಾಧ್ಯಮದವರನ್ನು ತಳ್ಳಿ ಯಡಿಯೂರಪ್ಪ ಮುಂದೆ ನಡೆದರು.

# ಸ್ವಾರ್ಥಕ್ಕಾಗಿ ಸೇರ್ಪಡೆ:
ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ಚಂದ್ರಶೇಖರ್ ಪಕ್ಷ ಬಿಟ್ಟು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಚುನಾವಣೆಗೂ ಮುನ್ನ ಈ ಮಾತನ್ನು ಹೇಳಿದ್ದರೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದವು. ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಇಂತಹ ನೀಚ ಕೃತ್ಯ ನಡೆಸುವ ಮೂಲಕ ಉಂಡ ಮನೆಗೆ ಎರಡು ಬಗೆದಿದ್ದಾರೆ. ಇನ್ನೆಂದೂ ಜೀವನದಲ್ಲಿ ಇವರು ಉದ್ಧಾರವಾಗುವುದಿಲ್ಲ. ಇಂಥವರಿಂದ ನಮ್ಮ ಪಕ್ಷದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಈ ಕೊನೆ ಕ್ಷಣದಲ್ಲಿ ನಾವು ಏನು ಮಾಡುತ್ತೇವೆ ಎಂದು ನೋಡಿ ಎಂದು ಹೇಳಿದ್ದರು. ಅದರಂತೆ ಹಣ ಕೊಟ್ಟು ಚಂದ್ರಶೇಖರ್ ಅವರನ್ನು ಖರೀದಿ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಪಕ್ಷ ಬದಲಾಯಿಸುವ ಚಂದ್ರಶೇಖರ್‍ರಂಥವರಿಂದ ಯಾವ ಪಕ್ಷಗಳು ಉದ್ದಾರವಾಗುವುದಿಲ್ಲ. ಇಂಥವರಿಂದ ರಾಜಕೀಯ ಮತ್ತಷ್ಟು ಕಲುಷಿತವಾಗುತ್ತದೆ ಎಂದು ಹೇಳಿದರು.

Facebook Comments