‘ನಾವೇನೂ ಮಾಡಲ್ಲ, ಅವರವರೇ ಕಿತ್ತಾಡಿಕೊಂಡು ಸರ್ಕಾರ ಪತನಗೊಳಿಸುತ್ತಾರೆ’ : ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಬೆಂಗಳೂರು, ಜೂ.26- ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಪ್ರಯತ್ನಕ್ಕೆ ನಾವು ಕೈ ಹಾಕುವುದಿಲ್ಲ. ಅವರೇ ಕಿತ್ತಾಡಿಕೊಂಡು ಸರ್ಕಾರ ಪತನಗೊಳಿಸುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನಸಭೆಯ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಒಳಜಗಳದ ಲಾಭವನ್ನು ಪಡೆಯಬೇಕಾದ ಅಗತ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೂಚನೆ ಕೊಟ್ಟಿದ್ದಾರೆ. ಹಾದಿ-ಬೀದಿಯಲ್ಲಿ ಅವರೇ ಬಡಿದಾಡಿಕೊಳ್ಳುತ್ತಿ ರುವಾಗ ನಾವು ಅಸ್ಥಿರಗೊಳಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ನಾನು ಅಹಮದಾಬಾದ್‍ಗೆ ಹೋಗಿದ್ದುದು ಪಕ್ಷದ ಬೆಳೆವಣಿಗೆಗಳ ಬಗ್ಗೆ ಚರ್ಚಿಸಲು. ಮಾಧ್ಯಮಗಳಲ್ಲಿ ಕೆಲವು ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಲಾಗುತ್ತದೆ ಎಂಬ ಕಪೋಲಕಲ್ಪಿತ ಸುದ್ದಿಗಳು ಬರುತ್ತದೆ. ಇದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವ ಸಂದರ್ಭದಲ್ಲೂ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಪ್ರತಿಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಸರ್ಕಾರ ರಚನೆ ಮಾಡಲು ಸಾಧ್ಯವಾಗದಿದ್ದರೂ ರಾಜ್ಯದ ಜನತೆ ಪಕ್ಷದ ಪರವಾಗಿದ್ದಾರೆ ಎಂದು ಹೇಳಿದರು.

ಜು.2ರಂದು ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಈವರೆಗೂ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಸಂಬಂಧಪಟ್ಟ ಶಾಸಕರಿಗೂ ಮಾಹಿತಿ ನೀಡಿಲ್ಲ. ಕೇವಲ ಅಧಿಕಾರ ಹಂಚಿಕೆಗಾಗಿ ಎರಡೂ ಪಕ್ಷಗಳ ನಾಯಕರು ಬಡಿದಾಡುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಹೇಳಿಕೆ ನೀಡಿದರೆ, ಧರ್ಮಸ್ಥಳದಲ್ಲಿರುವ ಸಿದ್ದರಾಮಯ್ಯ ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ರಚನೆಯಾಗಿ ತಿಂಗಳಾದರೂ ಜನಪರವಾದ ಒಂದೇ ಒಂದು ಕಾರ್ಯಕ್ರಮವನ್ನು ರೂಪಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಲೋಕಸಭೆ ಚುನಾವಣೆ, 29ರ ಕಾರ್ಯಕಾರಿಣಿ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತಂತೆ ಚರ್ಚಿಸಿದ್ದೇನೆ. ಬರಲಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವುದು ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಅಹಮಾದಾಬ್‍ಗೆ ಭೇಟಿ ಕೊಟ್ಟಿರುವುದಕ್ಕೂ, ಇಲ್ಲಿ ನಡೆದಿರುವ ವಿದ್ಯಮಾನಗಳಿಗೂ ಯಾವುದೇ ಸಂಬಂಧಿವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

Facebook Comments

Sri Raghav

Admin