ಯಡಿಯೂರಪ್ಪನವರೇ ನನ್ನ ತಾಳ್ಮೆ ಕೆಣಕಬೇಡಿ, ನಿಮ್ಮ ಬಣ್ಣ ಬಯಲು ಮಾಡ್ತಿನೀ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು, ಸೆ.20- ಗಾಜಿನಮನೆಯಲ್ಲಿ ಕುಳಿತಿರುವ ಯಡಿಯೂರಪ್ಪನವರು ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು. ಸರ್ಕಾರ ನಮ್ಮ ಕೈಯಲ್ಲಿದೆ. ಇಲ್ಲಿಯವರೆಗೆ ತಾಳ್ಮೆ ಯಿಂದಿದ್ದೇನೆ. ಕೆದಕಿದರೆ ನಿಮ್ಮ ಇತಿಹಾಸವನ್ನೂ ಕೆದಕಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಡಿಯೂರಪ್ಪ ಅವರು ಗಾಜಿನ ಮನೆಯಲ್ಲಿದ್ದುಕೊಂಡು ನಮ್ಮ ವಿರುದ್ಧ ಲಘುವಾಗಿ ಮಾತನಾಡುತ್ತಿದ್ದಾರೆ. 2008ರಲ್ಲಿ ಅಪ್ಪ -ಮಕ್ಕಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿ ಅವರೇ ಜೈಲಿಗೆ ಹೋಗಿ ಬಂದರು. ಈಗ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ವಯಸ್ಸಿಗೆ ತಕ್ಕಂತಹ ಗಾಂಭೀರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರು ಹಿರಿಯರು. ರಾಜಕೀಯ, ವಯಸ್ಸು ಮತ್ತು ಅನುಭವದಲ್ಲಿ ನನಗಿಂತಲೂ ಹಿರಿಯರು. ಆದರೆ ರಾಜ್ಯ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಅವರ ಪದ ಬಳಕೆ ಸರಿಯಿಲ್ಲ. ಪದ ಬಳಕೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ಒಳ್ಳೆಯದು. ಇಲ್ಲದಿದ್ದರೆ ಅವರೇ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಅಪ್ಪ ಮಕ್ಕಳು ಲೂಟಿಕೋರರು ಎಂದು ಹೇಳುತ್ತಾ ಯಡಿಯೂರಪ್ಪ ತಿರುಗುತ್ತಿದ್ದಾರೆ.  ಸರ್ಕಾರದಲ್ಲಿ ಪರ್ಸಂಟೇಜ್ ವ್ಯವಸ್ಥೆಯನ್ನು ಜಾರಿಗೆ ತಂದವರೇ ಯಡಿಯೂರಪ್ಪ. ಅವರು ಪರ್ಸಂಟೇಜ್‍ನ ಜನಕ. ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣ ಇನ್ನೂ ಸುಪ್ರೀಂಕೋರ್ಟ್‍ನಲ್ಲಿದೆ. ಅದನ್ನು ಮರೆಯಬೇಡಿ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

18 ಶಾಸಕರು ಮುಂಬೈಗೆ ಹೋಗಲು ಸಿದ್ಧರಾಗಿದ್ದಾರೆ. ನಾಳೆ ಬೆಳಗ್ಗಿಯೇ ವಿಮಾನದ ಮೂಲಕ ಪುಣೆ, ಮುಂಬೈಗೆ ಹೋಗುತ್ತಾರೆ ನೀವು ಬರುವುದಾದರೆ 5 ಕೋಟಿ ರೂ. ನೀಡುವುದಾಗಿ ಶಾಸಕ ಸುರೇಶ್ ಗೌಡ ಅವರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ. ಶಾಸಕ ಶಿವಳ್ಳಿ ಅವರನ್ನೂ ಸಂಪರ್ಕಿಸಲಾಗಿದೆ. ನಗರದ ಬೌರಿಂಗ್ ಇನ್ಸ್ ಸ್ಟಿಟ್ಯೂಟ್‍ನಲ್ಲಿ ಸಭೆ ನಡೆಸಿರುವುದು ಗೊತ್ತಿದೆ. ಇಲ್ಲಿಂದ 18 ಶಾಸಕರನ್ನು ಹೈಜಾಕ್ ಮಾಡಿ ಮಿಲ್ಟ್ರಿ ಭದ್ರತೆಯಲ್ಲಿ ಮತ್ತೆ ವಿಧಾನಸಭೆಗೆ ಕರೆದುಕೊಂಡು ಬರುವ ಯೋಜನೆ ರೂಪಿಸಿರುವುದು ಕೂಡ ಗೊತ್ತಾಗಿದೆ. ಆದರೆ ಪಾಪ ಯಡಿಯೂರಪ್ಪ ಅವರು ಇವೆಲ್ಲಾ ನಮಗೆ ಗೊತ್ತಿಲ್ಲ ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ಬೀಳಿಸಲು ಬಿಜೆಪಿಯವರು ವ್ಯರ್ಥ ಕಸರತ್ತು ನಡೆಸುತ್ತಿದ್ದಾರೆ. ನೀವು ಏನೆಲ್ಲಾ ಮಾಡುತ್ತೀರೋ ಮಾಡಿ, ಯಡಿಯೂರಪ್ಪ ಅವರ ಇತಿಹಾಸ ಎಂಥಹದ್ದು ಎಂಬುದು ನನಗೆ ತಿಳಿದಿದೆ. ನಮ್ಮ ಕುಟುಂಬವನ್ನು ಕೆದಕಿದರೆ ಅವರ ಇತಿಹಾಸವನ್ನು ಕೆದಕಬೇಕಾಗುತ್ತದೆ ಎಂದು ಹೇಳಿದರು.  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಅವರ ಆರೋಗ್ಯ ವಿಚಾರಿಸಿದ್ದೇನೆ. ಅವರೊಂದಿಗೆ ಬಿಜೆಪಿ ಸ್ನೇಹಿತರ ರಾಜಕೀಯವನ್ನೂ ಚರ್ಚಿಸಿದ್ದೇನೆ ಎಂದು ತಿಳಿಸಿದರು.

# ಜನರೇ ದಂಗೆ ಏಳಲಿದ್ದಾರೆ; ಸಿಎಂ
ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಶಾಸಕರನ್ನು ಖರೀದಿಸುವ ಪ್ರಯತ್ನವನ್ನು ಬಿಜೆಪಿ ಕೈಬಿಡದಿದ್ದರೆ ಜನರೇ ದಂಗೆ ಏಳಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ತವರು ಜಿಲ್ಲೆ ಹಾಸನಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಸಾಲ ಮನ್ನಾ ಮಾಡಲು ಭಾರಿ ಒತ್ತಡವಿತ್ತು. ಈ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಸಾಲ ಪಡೆದಿರುವ ರೈತರ ವಿವರ ನೀಡುವಂತೆ ನಿನ್ನೆ ನೋಡಲ್ ಅಧಿಕಾರಿಗಳಿಂದ ಮಾಹಿತಿ ಕೇಳಲಾಗಿದೆ.

ನಾವು ಈ ಕೆಲಸದಲ್ಲಿ ನಿರತರಾಗಿದ್ದರೆ, ಪಾಪದ ಹಣದಿಂದ ಶಾಸಕರನ್ನು ಖರೀದಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಆಡಳಿತ ಸುಗಮವಾಗಿ ನಡೆಸದಂತೆ ಅಡ್ಡಿ ಮಾಡಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಅವರು ಮುಂದುವರಿದರೆ ಜನರೇ ಬಿಜೆಪಿಯವರ ವಿರುದ್ಧ ದಂಗೆ ಏರಳಲಿದ್ದಾರೆ ಅಥವಾ ನಾವೇ ದಂಗೆ ಏಳುವಂತೆ ಜನರಿಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಭೂಗತ ಮಾಫಿಯಾ ಒಂದೊಂದೇ ಹೊರಗೆ ಬರುತ್ತಿದೆ. ಕಿಂಗ್‍ಪಿನ್ ಒಬ್ಬ ಶ್ರೀಲಂಕಾಕ್ಕೆ ಪರಾರಿಯಾಗಿದ್ದಾನೆ. ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅವರೇಕೆ ಪರಾರಿಯಾಗಬೇಕಿತ್ತು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಭ್ರಮಾಲೋಕದಲ್ಲಿ ಇದ್ದಾರೆ ಎಂದು ಹೇಳಿದರು.

Facebook Comments

Sri Raghav

Admin