ಚಂದ್ರಶೇಖರ್ ಕೈಕೊಡುತ್ತಾರೆಂದು ಮೊದಲೇ ಗೊತ್ತಿದ್ದರೂ ಬಿಎಸ್ವೈ ನಿರ್ಲಕ್ಷಿಸಿದ್ದೇಕೆ ..?

ಈ ಸುದ್ದಿಯನ್ನು ಶೇರ್ ಮಾಡಿ

Yaddyurappa-and-chandrashek

ಬೆಂಗಳೂರು,ನ.2- ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಲ್.ಚಂದ್ರಶೇಖರ್ ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಕೈ ಕೊಡಬಹುದೆಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕೆಲವರು ಸಲಹೆ ಮಾಡಿದ್ದರೂ ನಿರ್ಲಕ್ಷಿಸಿರುವುದು ಬೆಳಕಿಗೆ ಬಂದಿದೆ. ಪಕ್ಷದೊಳಗಿನ ಕೆಲ ಹಿತಶತ್ರುಗಳೇ ತೋಡಿದ ಖೆಡ್ಡಾದಲ್ಲಿ ಬಿದ್ದಿರುವ ಯಡಿಯೂರಪ್ಪನವರು ಈಗ ದಿಕ್ಕು ತೋಚದ ನಾವಿಕನಂತಾಗಿದ್ದಾರೆ.  ಚಂದ್ರಶೇಖರ್ ಹೇಳಿಕೇಳಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ. ಬಿಜೆಪಿಗೆ ಬಂದಾಗಲೇ ಅವರನ್ನು ನಂಬಬೇಡಿ ಎಂದು ಕೆಲವರು ಬಿಎಸ್‍ವೈಗೆ ಸಲಹೆ ಮಾಡಿದ್ದರು. ಮತದಾನಕ್ಕೆ ಕೆಲವೇ ದಿನಗಳು ಇರುವಾಗ ಆತ ಕೈ ಕೊಡಬಹುದೆಂಬ ಸುಳಿವು ಸಹ ನೀಡಿದ್ದರು. ಪಕ್ಷದಲ್ಲಿದ್ದ ಕೆಲವರು ವ್ಯವಸ್ಥಿತ ಪಿತೂರಿಯಿಂದಲೇ ಚಂದ್ರಶೇಖರ್ ಬಿಜೆಪಿಗೆ ಕೈ ಕೊಟ್ಟಿದ್ದು, ಪಕ್ಷದೊಳಗಿನ ಕೆಲ ನಾಯಕರ ಸ್ವಾರ್ಥ ಹಿತಾಸಕ್ತಿಯೇ ಇದಕ್ಕೆ ಕಾರಣ ಎಂಬುದು ಈಗ ಬಯಲಾಗಿದೆ.

ವಿಧಾನಪರಿಷತ್‍ನ ಸದಸ್ಯರೊಬ್ಬರು ಹಾಗೂ ಪಕ್ಷದ ಸಹ ವಕ್ತಾರರೊಬ್ಬರು ಬಿಎಸ್‍ವೈಗೆ ಚಂದ್ರಶೇಖರ್‍ನನ್ನು ನಂಬದಂತೆ ಪರಿ ಪರಿಯಾಗಿ ಮನವಿ ಮಾಡಿದ್ದರು. ಆತ ತನ್ನ ಸ್ವಾರ್ಥಕ್ಕಾಗಿ ಪಕ್ಷಕ್ಕೆ ಬಂದಿದ್ದಾನೆ ಹೊರತು ಬೇರೆ ಯಾವುದೇ ಸದುದ್ದೇಶವಿಲ್ಲ. ನಮ್ಮಲ್ಲಿರುವ ಕೆಲವರ ಕುತಂತ್ರದಿಂದಾಗೆಯೇ ಬಿಜೆಪಿಗೆ ಕರೆತರಲಾಗಿದೆ. ಯಾವುದಕ್ಕೂ ಎಚ್ಚರದಿಂದಿರಬೇಕೆಂದು ಸಲಹೆ ಮಾಡಲಾಗಿತ್ತು. ಅದಾಗ್ಯೂ ಬಿ.ಎಸ್.ಯಡಿಯೂರಪ್ಪನವರು ಎಚ್ಚೆತ್ತುಕೊಳ್ಳದೇ ಇಂದು ಬಿಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

# ಖೆಡ್ಡಾಕ್ಕೆ ಬಿದ್ದ ಬಿಜೆಪಿ:
ಹೇಳಿ ಕೇಳಿ ಬಿಜೆಪಿಗೆ ರಾಮನಗರದಲ್ಲಿ ನೆಲೆಯಿಲ್ಲ. ಇಲ್ಲಿ ಏನಿದ್ದರೂ ಕೇವಲ ಎರಡು ಕುಟುಂಬಗಳ ನಡುವಿನ ಕದನ. ಕಾಂಗ್ರೆಸ್ ನಾಯಕ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಕುಟುಂಬಗಳ ನಡುವಿನ ಕಲಹಕ್ಕೆ ರಾಮನಗರ ಚುನಾವಣಾ ಕಣ ಪ್ರಸಿದ್ಧಿ ಪಡೆದಿದೆ.

1985ರಲ್ಲಿ ಸೋತ ಲಿಂಗಪ್ಪ ಇಲ್ಲಿ 1989ರಲ್ಲಿ ಗೆದ್ದಿದ್ದರು. ಮುಂದೆ 94 ರಲ್ಲಿ ದೇವೇಗೌಡರು ಲಿಂಗಪ್ಪರನ್ನು ಸೋಲಿಸಿದರು. 1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಮತ್ತೆ ಇಲ್ಲಿ ಲಿಂಗಪ್ಪ ಗೆದ್ದಿದ್ದರು ಅದೂ ಅಂಬರೀಷ್ ವಿರುದ್ಧ. 1999ರಲ್ಲಿ ಮತ್ತೆ ಸಿ.ಎಂ. ಲಿಂಗಪ್ಪ ಗೆದ್ದರಾದರೂ ಮುಂದೆ 2004ರಲ್ಲಿ ಕುಮಾರಸ್ವಾಮಿ ಪ್ರವೇಶದಿಂದ ಮುಂದೆ 2008, 2013, 2018ರಲ್ಲಿ ಅವರ ಕಾರುಬಾರು ಇಲ್ಲಿ ನಡೆಯಲಿಲ್ಲ. ಬಂಡಾಯ ನಂಬಿ ಕೆಟ್ಟ ಬಿಜೆಪಿ: ಕ್ಷೇತ್ರದಲ್ಲಿ ಲಿಂಗಪ್ಪ ಹಳೆಯ ಹುಲಿ. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರಿಂದ ಅವರ ಸ್ಪರ್ಧೆಗೆ ಅವಕಾಶ ಇಲ್ಲವಾಯಿತು. ಸಹಜವಾಗಿಯೇ ಅವರು ಬಂಡಾಯದ ಮಾತುಗಳನ್ನು ಆರಂಭಿಸಿದರು. ಇದನ್ನೇ ನಂಬಿಕೊಂಡಿತ್ತು.

ಅದೇ ಹೊತ್ತಿಗೆ ಆಪದ್ಭಾವರಂತೆ ಕಂಡವರು ಸಿ.ಎಂ.ಲಿಂಗಪ್ಪನವರ ಪುತ್ರ ಎಲ್. ಚಂದ್ರಶೇಖರ್. ಚುನಾವಣಾ ಸಮಯದಲ್ಲಿ ನಡೆಯುವ ಸಾಮಾನ್ಯ ಬೆಳವಣಿಗೆಯಂತೆ ಅವರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಅವರನ್ನೇ ಅಭ್ಯರ್ಥಿಯನ್ನಾಗಿಯೂ ಘೋಷಿಸಿತು ಬಿಜೆಪಿ. ಯಾವತ್ತೂ ಗೆಲುವಿನ ತವಕದಲ್ಲಿರದಿದ್ದ ಬಿಜೆಪಿ ಈ ಬಾರಿ ಸಿ.ಎಂ.ಲಿಂಗಪ್ಪನವರ ಪುತ್ರನೇ ಕಣಕ್ಕಿಳಿದಿದ್ದಾನೆ ಎಂಬ ಹಿನ್ನೆಲೆಯಲ್ಲಿ ತುಸು ಉತ್ಸಾಹದಿಂದಿತ್ತು. ಎಲ್. ಚಂದ್ರಶೇಖರ್ ಅವರನ್ನೇ ಪೂರ್ತಿಯಾಗಿ ನಂಬಿದ್ದ ಬಿಜೆಪಿಗೆ ಮಸಾಲೆ ಬೆರೆಸಿದ ಗಾಳಿ ಸುದ್ದಿಗಳೂ ಮತ್ತಷ್ಟು ಅದರ ನಂಬಿಕೆಗೆ ಪುಷ್ಟಿ ಕೊಟ್ಟಿತ್ತು. ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ಲಿಂಗಪ್ಪ ವಿಚಾರ ಬಿಜೆಪಿಗೆ ಲಾಭ ತರಲಿದೆ.

ರಾಮನಗರದಲ್ಲೇ ಇದ್ದರೆ ಮಗನ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕಾರಣಕ್ಕೆ ಲಿಂಗಪ ಅವರನ್ನು ಬಳ್ಳಾರಿ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂಬೆಲ್ಲಾ ಸುದ್ದಿಗಳು ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು. ಇದನ್ನೇ ನಂಬಿಕೊಂಡು ತನ್ನ ಕಾಲಾಳುಗಳನ್ನು ಫೀಲ್ಡಿಗೆ ಇಳಿಸಿ, ಭರಪೂರ ಹಣ ಸುರಿದು ಗೆಲುವಿನ ಕನಸಿನಲ್ಲಿತ್ತು ಬಿಜೆಪಿ. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ತಮ್ಮದು ಅಪ್ಪಟ ಕಾಂಗ್ರೆಸ್ ಕುಟುಂಬ ಎಂಬುದನ್ನು ನಿರೂಪಿಸಿರುವ ಎಲ್. ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಈ ಘೋಷಣೆಯಿಂದ ಆಘಾತಕ್ಕೆ ಗುರಿಯಾಗಿದೆ.

Facebook Comments

Comments are closed.