ಬಿಎಸ್‍ವೈ ಮತ್ತೆ ರಾಜ್ಯಾದ್ಯಂತ ಪ್ರವಾಸ, ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01
ಬೆಂಗಳೂರು,ಜು.14-ಡೀಸೆಲ್, ಪೆಟ್ರೋಲ್ ಹಾಗೂ ವಿದ್ಯುತ್ ಬೆಲೆ ಏರಿಕೆ, ನೇಕಾರರ ಸಾಲ ಮನ್ನಾ ಹಾಗೂ ರೈತರ ಪೂರ್ಣ ಮೊತ್ತದ ಸಾಲ ಮನ್ನಾ ಮಾಡುವುದು ಸೇರಿದಂತೆ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ವೈಫಲ್ಯವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲು ಮುಂದಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಹೋರಾಟಕ್ಕೆ ಧುಮುಕಲು ಬಿಜೆಪಿ ಸಜ್ಜಾಗಿದೆ. ಅಧಿವೇಶನದಲ್ಲಿ ಸರ್ಕಾರದಿಂದ ಸ್ಪಷ್ಟ ಉತ್ತರ ಬಾರದ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲ್ತಿ ಮತ್ತು ಸುಸ್ತಿ ಸಾಲ ಮನ್ನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಸಾಲ ಮನ್ನಾ ಮಾಡುವ ವಿಷಯದಲ್ಲೂ ಸಾಕಷ್ಟು ಗೊಂದಲಗಳು ಇರುವುದರಿಂದ ರೈತರಿಗೆ ಇದರ ಪ್ರಯೋಜನವಾಗಲಿದೆ ಎಂಬುದು ಸ್ಪಷ್ಟನೆ ಇಲ್ಲ.  ಕರಾವಳಿ, ಉತ್ತರ ಕರ್ನಾಟಕ, ಮಧ್ಯಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೂ ಬಜೆಟ್‍ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಗಳನ್ನು ಪ್ರಕಟಿಸದಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ.

ಪ್ರವಾಸಕ್ಕೆ ಬಿಎಸ್‍ವೈ ಸಜ್ಜು:
ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಸಿದ್ಧತೆ ನಡೆಸುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಸರ್ಕಾರದ ವಿರುದ್ಧ ಆಂದೋಲನ ನಡೆಸಲಿದ್ದಾರೆ . ಸಾಲಮನ್ನಾ ವಿಚಾರ ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸದ ಸಮ್ಮಿಶ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿರುವ ಯಡಿಯೂರಪ್ಪ ಜನತೆಗೆ ಮೈತ್ರಿ ಸರ್ಕಾರದ ವೈಫಲ್ಯಗಳ ಬಗ್ಗೆ ತಿಳಿಸಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಿಸುವ ಟಾರ್ಗೆಟ್ ನೀಡಿರುವ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ನೀಡಿದೆ. ಅದರಂತೆ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಂತ್ರ ಸೇರಿದಂತೆ ಇಡೀ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಲಿದ್ದು, ಅದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಹಾಗೂ ಜನರ ವಿಶ್ವಾಸಗಳಿಸಲು ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.   ಆಗಸ್ಟ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಷ್ಟರಲ್ಲಿ ಒಂದು ಸುತ್ತಿನ ರಾಜ್ಯ ಪ್ರವಾಸ ಮುಗಿಸಿ ಪಕ್ಷ ಸಂಘಟನೆ ಹಾಗು ಲೋಕಸಭಾ ಚುನಾವಣೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಯಡಿಯೂರಪ್ಪ ನೀಡಲಿದ್ದಾರೆ.

ಕಳೆದ ಬಾರಿ ಪ್ರತಿ ಜಿಲ್ಲೆಗೆ ಹೋಗಿದ್ದ ಯಡಿಯೂರಪ್ಪ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಪ್ರಚಾರದೊಂದಿಗೆ ಪಕ್ಷ ಸಂಘಟನೆ ಮಾಡಲಿದ್ದಾರೆ. ಬಜೆಟ್ ಮೇಲಿನ ಭಾಷಣಕ್ಕೆ ಕುಮಾರಸ್ವಾಮಿ ನೀಡುವ ಉತ್ತರದ ಮೇಲೆ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಈಗಾಗಲೇ ಹೇಳಿದ್ದ ಯಡಿಯೂರಪ್ಪ ಇದೀಗ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದು ಯಾವ ತಂತ್ರ ಹೆಣೆಯುತ್ತಿದ್ದಾರೆ ಎನ್ನುವುದು ನಿಗೂಢವಾಗಿದೆ.

Facebook Comments

Sri Raghav

Admin