ವಿಶೇಷ ಪೂಜೆ ಸಲ್ಲಿಸಿ ವಿಧಾನಸೌಧದಲ್ಲಿ ಕಚೇರಿ ಪ್ರವೇಶಿಸಿದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yaddyurappa--01

ಬೆಂಗಳೂರು,ಜು.2-ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಧಾನಸೌಧದಲ್ಲಿ ಅಧಿಕೃತವಾಗಿ ತಮ್ಮ ಕಚೇರಿಯನ್ನು ಪ್ರವೇಶಿಸಿದರು.  ವಿಧಾನಸೌಧದ ಕೊಠಡಿ ಸಂಖ್ಯೆ 161ರಲ್ಲಿ ಯಡಿಯೂರಪ್ಪ ಹಾಗೂ ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಚೇರಿಯನ್ನು ಪ್ರವೇಶ ಮಾಡಿದರು. ಇದಕ್ಕೂ ಮುನ್ನ ಕಚೇರಿಯನ್ನು ವಿಶೇಷ ತಳಿರು-ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ಇನ್ನು ಅವರ ಕೊಠಡಿಯಲ್ಲಿ ರಾಷ್ಟ್ರಪತಿ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ , ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಆರ್‍ಎಸ್‍ಎಸ್ ಹಿರಿಯ ನಾಯಕ ಶ್ಯಾಮ್‍ಪ್ರಸಾದ್ ಮುಖರ್ಜಿ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಕಚೇರಿಯನ್ನು ಪ್ರವೇಶಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 37 ಶಾಸಕರನ್ನು ಹೊಂದಿದ ಪಕ್ಷ ಆಡಳಿತ ನಡೆಸುವಂತಾಗಿದೆ. 104 ಶಾಸಕರನ್ನು ಹೊಂದಿರುವ ಪಕ್ಷ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವಂತಾಗಿದೆ. ಇದು ಪ್ರಜಾಪ್ರಭುತ್ವದ ದುರಂತ ಎಂದು ಕುಹಕವಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಜನತೆ ನಮಗೆ ಪೂರ್ಣ ಜನಾದೇಶ ನೀಡದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನರಿಗೆ ಕೊಟ್ಟ ಮಾತಿನಂತೆ ರೈತರ ಸಾಲವನ್ನು ಮನ್ನಾ ಮಾಡಬೇಕು. ಮೊದಲು ಬಜೆಟ್ ಮಂಡನೆ ಮಾಡಲಿ. ಈ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆಯೇ ಎಂಬುದನ್ನು ಕಾದು ನೋಡುತ್ತೇವೆ. ಇಲ್ಲದಿದ್ದರೆ ಸದನದ ಒಳಗೂ, ಹೊರಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಸರ್ಕಾರ ಮಾಡುವ ಒಳ್ಳೆ ಕೆಲಸಗಳಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ತಪ್ಪು ಮಾಡಿದಾಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ತಿದ್ದುವ ಕೆಲಸ ಮಾಡುತ್ತೇವೆ ಎಂದರು. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಯುತ್ತದೆ. ನಂತರ ನಮ್ಮ ಹೋರಾಟದ ರೂಪುರೇಷೆಗಳು ಸಿದ್ಧವಾಗುತ್ತವೆ. ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಉಪನಾಯಕ ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಎಂ.ಉದಾಸಿ, ಶಾಸಕ ರಾಜುಗೌಡ ನಾಯಕ್, ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin