ಯಡಿಯೂರಪ್ಪ ಗುಜರಾತ್’ಗೆ ಹಾರಿದ್ದೇಕೆ..? ಸದ್ದಿಲ್ಲದೇ ನಡೆದಿದೆಯಾ ‘ಆಪರೇಷನ್ ಕಮಲ’..?

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--BJP--01

ಬೆಂಗಳೂರು.ಜೂ.25 : ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಒಂದೆಡೆಯಾದರೆ, ಏತನ್ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ದಿಢೀರ್ ಗುಜರಾತ್ ಗೆ ತೆರಳಿರುವುದು ಹಲವು ಉಹಾಪೋಹಗಳಿಗೆ ಎಡಮಾಡಿಕೊಟ್ಟಿದೆ. ಯಡಿಯೂರಪ್ಪ ಅವರ ಜೊತೆ ಶಾಸಕರಾದ ಬಸವರಾಜ್ ಬೊಮ್ಮಯಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ  ಅವರುಗಳು ಅಹಮದಾಬಾದ್ ಗೆ ತೆರಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ರಾಜ್ಯರಾಜಕಾರಣದ ಸದ್ಯದ ರಾಜಕೀಯ ಚಿತ್ರಣದ ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಅಲ್ಲದೇ ಪರಿಸ್ಥಿತಿಯ ಲಾಭ ಪಡೆಯುವ ನಿಟ್ಟಿನಲ್ಲಿ ಮುಂದಿನ ನಡೆ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ನ ಕೆಲವು ಶಾಸಕರನ್ನು ಪಕ್ಷದತ್ತ ಸೆಳೆಯಲು ಮತ್ತೇ “ಅಪರೇಷನ್ ಕಮಲ” ನಡೆಸಲು ತೆರೆಮರೆಯಲ್ಲಿ ಕಸರತ್ತು ಆರಂಭಗೊಂಡಿದೆ. ಬಜೆಟ್ ಹಾಗೂ ಕಮಿಷನ್ ವಿಚಾರದಲ್ಲಿ ಹಾಲಿ ಮತ್ತು ಮಾಜಿ ಸಿಎಂ ನಡುವೆ ಪರೋಕ್ಷ ವಾಕ್ಸಮರ ನಡೆಯುತ್ತಿದೆ.

ನಮ್ಮ ಸರ್ಕಾರ ಎಷ್ಟು ದಿನ ಇರುತ್ತೆ ಎಂಬುದು ಮುಖ್ಯವಲ್ಲ, ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದು ಸಿಎಂ ಕುಮಾರಸ್ವಾಮಿ ಪದೇ, ಪದೇ ನೀಡುತ್ತಿರುವ ಹೇಳಿಕೆಗೆ ಬಿಜೆಪಿ ರಣತಂತ್ರ ರೂಪಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾದ ನಂತರ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಆದರೆ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಹಿಡಿದು, ಸಂಪುಟ ವಿಸ್ತರಣೆಯವರೆಗೂ ಎರಡೂ ಪಕ್ಷಗಳೊಳಗೆ ಹಗ್ಗಜಗ್ಗಾಟ ಮುಂದುವರೆದಿತ್ತು. ಇದೀಗ ಮೈತ್ರಿ ಸರ್ಕಾರದೊಳಗಿನ ಆಂತರಿಕ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರ ಅಹ್ಮದಾಬಾದ್ ಭೇಟಿ ಭೇಟಿ ಭಾರೀ ಕುತೂಹಲವನ್ನು ಮೂಡಿಸಿದೆ.

ಬಿಜೆಪಿ ಪಕ್ಷದ ಉನ್ನತ ಮೂಲಗಳ ಪ್ರಕಾರ ಎರಡನೇ ಬಾರಿ ಸರ್ಕಾರ ರಚನೆಗೆ ಅವಕಾಶ ಸಿಕ್ಕರೆ, ಪ್ರಯತ್ನಿಸಲು ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಸಜ್ಜಾಗುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಅಮಿತ್ ಶಾ ಬಳಿ ಚರ್ಚಿಸಲು ಯಡಿಯೂರಪ್ಪ ಅಹ್ಮದಾಬಾದಿಗೆ ತೆರಳಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದೆಡೆ ಬಿಜೆಪಿ ಹೈಕಮಾಂಡ್ ಮುಂಬರುವ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುತ್ತಿದೆ. ಮತ್ತೊಂದೆಡೆ ಎರಡನೇ ಬಾರಿ ಸರ್ಕಾರ ರಚನೆಗೆ ಅವಕಾಶ ಸಿಕ್ಕರೆ ಬಾಚಿಕೊಳ್ಳುವ ತವಕದಲ್ಲಿದೆ. ಅಮಿತ್ ಶಾ ಮತ್ತು ಯಡಿಯೂರಪ್ಪ ಭೇಟಿಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಎಚ್ಡಿಕೆ ನಡುವಿನ ವೈಷಮ್ಯ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ತರುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುಮಾರಸ್ವಾಮಿ ಮಾತು ನೀಡಿದಂತೆ ಸಾಲಮನ್ನಾ ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಗಲಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರು ಕ್ಷಣವೇ ಯಡಿಯೂರಪ್ಪ ರೈತರ ಸಾಲಮನ್ನಾ ಘೋಷಣೆ ಮಾಡಿದ್ದರು. ಸರ್ಕಾರ ರಚಿಸುವ ಸಾಧ್ಯತೆ ಕ್ಷೀಣಿಸಿತ್ತು, ಆ ಕಾರಣಕ್ಕಾಗಿಯೇ ಯಡಿಯೂರಪ್ಪ ಸಾಲಮನ್ನಾ ಘೋಷಿಸುವ ಮೂಲಕ ಬುದ್ಧಿವಂತಿಕೆ ಮೆರೆದರು ಎಂಬ ಮಾತುಗಳೂ ಇವೆ. ಆದರೆ ಇವ್ಯಾವುದೂ ಜನಸಾಮಾನ್ಯರಿಗೆ ಮುಖ್ಯವಾಗುವುದಿಲ್ಲ. ಯಡಿಯೂರಪ್ಪ ಆದೇಶಿಸಿದ್ದರು ಎಂಬುದಷ್ಟೇ ಮುಖ್ಯವಾಗಲಿದೆ. ಒಟ್ಟಿನಲ್ಲಿ ಈ ಎಲ್ಲಾ ಲೆಕ್ಕಾಚಾರಗಳನ್ನೂ ಗಮನಿಸಿದರೆ ರಾಜ್ಯ ರಾಜಕೀಯದಲ್ಲಿ ಎರಡನೇ ಬಾರಿ ಗದ್ದುಗೆ ಗುದ್ದಾಟದ ಸಾಧ್ಯತೆಗಳಿವೆ. ಆದರೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯವನ್ನು ಶಮನ ಮಾಡಿದ್ದೇ ಆದಲ್ಲಿ, ಈ ಎಲ್ಲಾ ಪ್ರಶ್ನೆಗಳಿಗೂ ತಾರ್ಕಿಕ ಅಂತ್ಯ ಸಿಗಲಿದೆ. ಅಂತೆಯೇ ಸಮ್ಮಿಶ್ರ ಸರ್ಕಾರ ಸದ್ಯದ ಮಟ್ಟಿಗಾದರೂ ಮುಂದುವರೆಯಲಿದೆ.

Facebook Comments

Sri Raghav

Admin