ಯಡಿಯೂರಪ್ಪ ಸರ್ಕಾರಕ್ಕೆ ಸಿಡಿ ಫೋಬಿಯ, ಮೀಸಲಾತಿಯ ಕಾಟ, ಬಜೆಟ್ ಸಂಕಟ..!

ಈ ಸುದ್ದಿಯನ್ನು ಶೇರ್ ಮಾಡಿ

– ಮಹಾಂತೇಶ್ ಬ್ರಹ್ಮ
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದರ ಮೇಲೊಂದು ಸಂಕಷ್ಟದ ಸರಮಾಲೆಗಳು ಅವರ ಕೊರಳಿಗೆ ಸುತ್ತಿಕೊಳ್ಳುತ್ತಿವೆ. ಈಗಾಗಲೇ ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹೋರಾಟದಲ್ಲಿ ಸಾಕಷ್ಟು ಹೈರಾಣಾಗಿದ್ದ ಬಿಎಸ್‍ವೈ ಸರ್ಕಾರಕ್ಕೆ ಬೆಳಗಾವಿಯ ಸಾಹುಕಾರನ ರಾಸಲೀಲೆಯ ಸಿಡಿ ಸ್ಪೋಟ ಪ್ರಕರಣ ದೊಡ್ಡ ಮುಜುಗರವನ್ನೇ ಉಂಟು ಮಾಡಿದೆ.

ಇದಕ್ಕೆ ಪ್ರತಿಯಾಗಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳುವುದರ ಮೂಲಕ ರಮೇಶ್ ಜಾರಕಿಹೊಳಿಯವರ ತಲೆದಂಡವಾಗಿದೆ.ಮತ್ತೊಂದಡೆ ಮಹಿಳಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಪೊಲೀಸರು ರಮೇಶ್ ಜಾರಕಿಹೊಳಿಯವರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದಳು ಎನ್ನಲಾದ ಸಂತ್ರಸ್ತೆಗಾಗಿ ಬೆಂಗಳೂರಿನ ಗಂಗಾ ನಗರ ಮತ್ತು ಆರ್.ಟಿ.ನಗರದ ಸುತ್ತಮುತ್ತ ಇರುವ ಸುಮಾರು 60 ಪಿಜಿಗಳಲ್ಲಿ ತಲಾಷ್ ನಡೆಸಿದರೂ ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪನವರ ಬೆವರಿಳಿಸಿರುವುದಂತು ಸುಳ್ಳಲ್ಲ. ನಿಮ್ಮ ಸರ್ಕಾರದ ಬಗ್ಗೆ ಕರ್ನಾಟಕದಲ್ಲಿ ಈಗಾಗಲೇ ಆಡಳಿತ ವಿರೋ ಅಲೆ ಶುರುವಾಗಿದೆ. ಇದು ಹೀಗೆ ಮುಂದುವರಿದರೆ ಖಂಡಿತ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ನೀವು ಆದಷ್ಟು ಬೇಗ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿ ಇವೆಲ್ಲವುಗಳನ್ನು ಬಗೆಹರಿಸಿ ಎಂದು ಖಾರವಾಗಿ ಎಚ್ಚರಿಕೆ ನೀಡಲಾಗಿದೆ ಎಂಬುದು ರಾಜ್ಯ ಬಿಜೆಪಿ ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಮತ್ತೊಂದು ಅಚ್ಚರಿ ಎಂದರೆ ರಾಜಶೇಖರ ಮುಲಾಲಿ ಎಂಬ ಸಾಮಾಜಿಕ ಕಾರ್ಯಕರ್ತ ನನ್ನ ಬಳಿ 19 ರಾಜಕಾರಣಿಗಳ ಬೆತ್ತಲೆ ಸಿಡಿ ಇವೆ ಎಂದು ಹೇಳಿಕೆ ಕೊಟ್ಟು ಇಡೀ ಬಿಜೆಪಿ ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ನಾರಾಯಣ ಗೌಡ, ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು ಅವರು ಮಾಧ್ಯಮಗಳು ನಮ್ಮ ವಿರುದ್ಧ ವೈಯಕ್ತಿಕ ವರದಿ ಬಿತ್ತರಿಸದಂತೆ ಮುಂಗಡವಾಗಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ.

ಒಂದಂತು ಸ್ಪಷ್ಟ…ಅದೇನಂದರೆ ಕುಂಬಳಕಾಯಿ ಕಳ್ಳರೆಂದರೆ ಇವರೇತಕೆ ತಮ್ಮ ಹೆಗಲು ಮುಟ್ಟಿಕೊಂಡರೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸುತ್ತಿರುವ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಲು ಕಾಲ್ನಡಿಗೆಯಲ್ಲಿ ಬಂದು ಮುಖ್ಯಮಂತ್ರಿಯವರಿಗೆ ಮನವಿ ಕೊಟ್ಟು ಜೊತೆಗೆ ಸರ್ಕಾರಕ್ಕೆ ಸಮಯದ ಗಡುವು ಕೊಟ್ಟರು.

ಆದರೆ ಅದ್ಯಾವುದಕ್ಕೂ ಸಕಾರಾತ್ಮಕ ಸ್ಪಂದನೆ ಸಿಗದೇ ಇದ್ದಾಗ ಮತ್ತೇ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಪಂಚಮಸಾಲಿ ಸಮಾಜದ ಮೀಸಲಾತಿಯ ಹೋರಾಟವೇನೂ ನಿನ್ನೆ ಮೊನ್ನೆಯ ಹೋರಾಟವಂತು ಅಲ್ಲವೇ ಅಲ್ಲ.

1994ರಲ್ಲಿ ಸಿ.ಎಂ.ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದ ಅವಯಲ್ಲಿ ಶುರುವಾದ ಹೋರಾಟ ಅಂದಿನ ಪ್ರಧಾನ ಮಂತ್ರಿ ವಾಜಪೇಯಿಯವರ ಬಳಿ ಅಂದು ಕೇಂದ್ರ ಸಚಿವರಾಗಿದ್ದ ಯತ್ನಾಳ್‍ರವರ ನೇತೃತ್ವದಲ್ಲಿ ತೆರಳಿ ತಮ್ಮ ಮೀಸಲಾತಿಯ ಬೇಡಿಕೆ ಸಲ್ಲಿಸಿದ್ದರು.

ಇದರ ಪ್ರತಿಫಲವಾಗಿ ಕರ್ನಾಟಕ ಸರ್ಕಾರ 2009ರಲ್ಲಿ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರ್ಪಡೆ ಮಾಡಲಾಯಿತು. ಆದರೆ ಈಗ ಕರ್ನಾಟಕದಲ್ಲಿ 13 ಶಾಸಕರನ್ನೊಳಗೊಂಡ ಪಂಚಮಸಾಲಿ ಸಮಾಜ ರಾಜಕೀಯವಾಗಿ ಎಚ್ಚೆತ್ತು ಮೀಸಲಾತಿಗಾಗಿ ಹಕ್ಕೊತ್ತಾಯ ಮಾಡುತ್ತಿದೆ. ಈಗಾಗಲೇ ಯಡಿಯೂರಪ್ಪನವರ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡುವುದರ ಮೂಲಕ ಸಂಪುಟ ಉಪ ಸಮಿತಿ ಕೂಡ ರಚಿಸಿದೆ.

ಇದೇ ರೀತಿ ಕುರುಬ ಸಮಾಜದವರು ಎಸ್ಟಿ ಮೀಸಲಾತಿಗಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದರೆ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದಿರುವ ಕುಂಬಾರ ಸಮಾಜದವರು ಸಹ ಮೀಸಲಾತಿ ಮತ್ತು ಅಭಿವೃದ್ಧಿ ನಿಗಮದ ಸ್ಥಾಪನೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.

ಬಿಎಸ್‍ವೈ ಸರ್ಕಾರಕ್ಕೆ ಮತ್ತೊಂದು ದೊಡ್ಡ ಸವಾಲೆಂದರೆ ಕೊರೊನಾ ಆರ್ಭಟಕ್ಕೆ ತತ್ತರಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಸರ್ಕಾರದ ಖಜಾನೆ ಖಾಲಿಯಾಗಿರುವ ಈ ಸಂದರ್ಭದಲ್ಲಿ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಒಂದು ಕಡೆ ಸಿಡಿ ಫೋಬಿಯ, ಮತ್ತೊಂದು ಕಡೆ ಮೀಸಲಾತಿಯ ಕಾಟ,ಇನ್ನೊಂದು ಕಡೆ ನಾಳೆಯ ಬಜೆಟ್ ಇವೆಲ್ಲವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಅದೇಗೆ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin