ಬಿಬಿಎಂಪಿ ಸಭೆಯಲ್ಲೂ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ವೀರ ಸಾವರ್ಕರ್ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಯಲಹಂಕ ನ್ಯೂ ಟೌನ್ ಸಮೀಪದ ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಹೆಸರಿಡುತ್ತಿರುವುದು ಪಾಲಿಕೆಯಲ್ಲೂ ರಾಜಕೀಯ ಕೆಸರೆರಚಾಟಕ್ಕೆ ಎಡೆಮಾಡಿದೆ.

ವೀರ ಸಾವರ್ಕರ್ ಹೆಸರಿಡಲು ಬಿಜೆಪಿ ಆಡಳಿತವಿರುವ ಪಾಲಿಕೆಯಲ್ಲಿ ಸ್ವ ನಿರ್ಣಯ ತೆಗೆದುಕೊಂಡಿದ್ದರು. ಇಂದು ಉದ್ಘಾಟನೆ ದಿನಾಂಕ ಕೂಡ ನಿಗದಿಯಾಗಿತ್ತು.

ನಿನ್ನೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿ ಅನ್ಯ ರಾಜ್ಯದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಹೆಸರಿಡುವ ಬದಲು ನಮ್ಮ ರಾಜ್ಯದಲ್ಲೇ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ.

ಅವರ ಹೆಸರು ನಾಮಕರಣ ಮಾಡಬೇಕೆಂದು ಹೇಳಿದ್ದರು. ಈ ನಡುವೆ ಇಂದು ನಡೆಯಬೇಕಿದ್ದ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ಸರ್ಕಾರ ಮುಂದಕ್ಕೆ ಹಾಕಿದೆ. ಕಿಡಿಗೇಡಿಗಳು ರಾತ್ರೋರಾತ್ರಿ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ರಸ್ತೆ ಎಂದು ಪೈಂಟ್‍ನಲ್ಲಿ ಬರೆದುಬಿಟ್ಟಿದ್ದಾರೆ.

ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಇಂದು ಬಿಬಿಎಂಪಿ ಸಾಮಾನ್ಯ ಸಭೆಯಲ್ಲೂ ವೀರ ಸಾವರ್ಕರ್ ಹೆಸರಿಡುವುದಕ್ಕೆ ಪ್ರತಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.  ಸಭೆ ಪ್ರಾರಂಭಕ್ಕೂ ಮುನ್ನ ಆಡಳಿತ ಪಕ್ಷದ ಸದಸ್ಯರ ಧೋರಣೆ ಖಂಡಿಸಿ ಪ್ರತಿಪಕ್ಷದ ಸದಸ್ಯರು ಕೌನ್ಸಿಲ್ ಸಭೆ ಹೊರಭಾಗದಲ್ಲಿ ಪ್ರತಿಭಟನೆ ಮಾಡಿ ನಂತರ ಪ್ಲೇ ಬೋರ್ಡ್‍ಗಳನ್ನು ಹಿಡಿದು ಸಭೆಯಲ್ಲೂ ಧರಣಿ ನಡೆಸಿದರು.

ಸಭೆ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಪ್ರತಿಪಕ್ಷದ ನಾಯಕರಾದ ಅಬ್ದುಲ್ ವಾಜೀದ್, ನೇತ್ರಾ ನಾರಾಯಣ್ ಮತ್ತಿತರರು ಮಾತನಾಡಿ, ಯಲಹಂಕ ಮೇಲ್ಸೇತುವೆಗೆ ಬೇರೆ ರಾಜ್ಯದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಹೆಸರಿಡುವ ಬದಲು ನಮ್ಮ ರಾಜ್ಯದ ಸ್ವಾತಂತ್ರ್ಯ ಸೇನಾನಿಗಳ ಹೆಸರಿಡಬೇಕೆಂದು ಆಗ್ರಹಿಸಿದರು.

ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡುತ್ತಿರುವುದು ರಾಜಕೀಯ ಕೆಸರೆರಚಾಟಕ್ಕೆ ಎಡೆಮಾಡಿಕೊಟ್ಟಿದ್ದು, ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುವುದೋ ಕಾದು ನೋಡಬೇಕಿದೆ.

Facebook Comments