5700 ಕೆಜಿ ತೂಕದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.8- ರಾಕಿಂಗ್‍ಸ್ಟಾರ್ ಯಶ್ ಅವರು ಇಂದು ತನ್ನ 35ನೆ ವರ್ಷದ ಹುಟ್ಟುಹಬ್ಬವನ್ನು ರಾತ್ರಿಯಿಂದಲೇ ಬಹಳ ಅದ್ಧೂರಿಯಾಗಿ ಅಭಿಮಾನಿ ಮತ್ತು ಕುಟುಂಬಸ್ಥರ ಜತೆ ಆಚರಿಸಿಕೊಂಡರು. ನಾಯಂಡಹಳ್ಳಿ ಸಮೀಪವಿರುವ ನಂದಿಲಿಂಕ್ ಗ್ರೌಂಡ್‍ನಲ್ಲಿ ಅಭಿಮಾನಿಗಳು ಯಶ್‍ಗಾಗಿ ಬೃಹತ್ ವೇದಿಕೆ ಸಿದ್ಧಪಡಿಸಿ ಮನರಂಜನಾ ಕಾರ್ಯಕ್ರಮ ಆಯೋಜಿಸಿದ್ದರು.

ಇದೇ ಪ್ರಥಮ ಬಾರಿಗೆ 5,700 ಕೆಜಿ ತೂಕದ ಬೃಹದಾಕಾರದ ಕೇಕ್ ಹಾಗೂ ಯಶ್ ಅವರ 216 ಅಡಿ ಕಟೌಟ್ ನಿರ್ಮಾಣ ಮಾಡಿರುವುದು ವಿಶೇಷ. ರಾತ್ರಿ 12 ಗಂಟೆಗೆ ಪತ್ನಿ ರಾಧಿಕಾ ಪಂಡಿತ್ ಜತೆ ಕೇಕ್ ಕತ್ತರಿಸಿ ಮಾತನಾಡಿದ ಯಶ್, ಈ ವರ್ಷ ನನ್ನ ಹುಟ್ಟುಹಬ್ಬ ಬಹಳ ಖುಷಿ ನೀಡಿದೆ. ಈ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಪ್ರೀತಿ-ವಿಶ್ವಾಸ ನನ್ನ ಹಾಗೂ ಕನ್ನಡ ಚಿತ್ರರಂಗದ ಮೇಲೆ ಸದಾ ಇರಲಿ ಎಂದರು.

ಕಾರ್ಯಕ್ರಮಕ್ಕೆ ವಿವಿಧ ಕಡೆಗಳಿಂದ ಯಶ್ ಅಭಿಮಾನಿಗಳು ಆಗಮಿಸಿದ್ದು, ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳನ್ನು ಮಾಡಲಾಗಿತ್ತು. ರಾತ್ರಿಯಿಂದಲೇ ಯಶ್ ಅವರು ನಟಿಸಿರುವ ಚಿತ್ರಗೀತೆಗಳನ್ನು ಹಾಡುವ ಮೂಲಕ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಅಭಿಮಾನಿಗಳನ್ನು ರಂಜಿಸಿದವು. ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳಿಗೆ ಗಿಡ ಬೆಳೆಸಿ ಪರಿಸರ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಸಸಿ ನೀಡಿರುವುದು ವಿಶೇಷ. ಇಂದು ಕೂಡ ವೇದಿಕೆಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ಜರುಗಲಿವೆ.

ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಫೋಸ್ಟರ್‍ಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಉಂಟುಮಾಡಿದೆ. ಬಾಲಿವುಡ್ ನಟ ಸಂಜಯ್‍ದತ್ ಕೂಡ ಕೆಜಿಎಫ್-2 ಚಿತ್ರದಲ್ಲಿ ಅಭಿನಯಿಸಿದ್ದು, ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆ ಉಂಟಾಗಿದೆ. ಆಂಧ್ರದಲ್ಲಿ ಬೃಹತ್ ಸೆಟ್‍ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅಭಿಮಾನಿಗಳ ಕಾತರದಿಂದ ಚಿತ್ರ ವೀಕ್ಷಣೆಗೆ ಕಾಯುತ್ತಿದ್ದಾರೆ.

Facebook Comments