ಸಿಎಂ ಯಡಿಯೂರಪ್ಪನವರ ಕಾರ್ಯವೈಖರಿಗೆ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.27- ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೊರೊನಾ ಸಂದರ್ಭದಲ್ಲಿ ಸರ್ಕಾರದಿಂದ ನೆರವು ಪಡೆದಿದ್ದ ಫಲಾನುಭವಿಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಒಟ್ಟು 10 ಫಲಾನುಭವಿಗಳ ಜೊತೆ ಬಿಎಸ್‍ವೈ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಪ್ರತಿಯೊಬ್ಬ ಫಲಾನುಭವಿಗಳು ಸರ್ಕಾರದ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದರು. ಪ್ರಾರಂಭದಲ್ಲಿ ವಿಜಯಪುರದ ಗರ್ಭಿಣಿಯೊಬ್ಬರು ತಾವು ಕೊರೊನಾ ಸಂದರ್ಭದಲ್ಲಿ ಪಾಸಿಟಿವ್ ಬಂದಿದ್ದರೂ ಹೇಗೆ ಎದುರಿಸಿದೆ ಎಂಬುದನ್ನು ಸಿಎಂ ಬಳಿ ನೋವು ತೋಡಿಕೊಂಡರು.

ಕೊರೊನಾದ ವೇಳೆ ತಮಗೆ ಪಾಸಿಟಿವ್ ಬಂದಿದ್ದರೂ ದೃತಿಗೆಡದೆ ಕೆಲಸ ಮಾಡಿದೆ. ಈ ವೇಳೆ ನನಗೆ ಜಿಲ್ಲಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಎಲ್ಲ ರೀತಿಯ ನೆರವು ನೀಡಬೇಕೆಂದು ಕೋರಿದ್ದರು.

ನಂತರ ಬೆಳಗಾವಿ ಜಿಲ್ಲೆಯ ಫಲಾನುಭವಿಯೊಬ್ಬರು ಲಾಕ್‍ಡೌನ್ ವೇಳೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ತಂದೆಗೆ ಸ್ವತಃ ಮುಖ್ಯಮಂತ್ರಿಗಳೇ ಜಿಲ್ಲಾಧಿಕಾರಿಗಳ ಮೂಲಕ ಔಷಧಿಗಳು ಸೇರಿದಂತೆ ಚಿಕಿತ್ಸೆಗೆ ಅಗತ್ಯ ನೆರವುನೀಡಿದ್ದನ್ನು ಸ್ಮರಿಸಿದರು.

ಮೈಸೂರು ಜಿಲ್ಲೆ ನಂಜನಗೂಡಿನ ಫಲಾನುಭವಿಯೊಬ್ಬರು ಕಳೆದ ವರ್ಷ ಅತಿವೃಷ್ಟಿಯಿಂದ ಮನೆ ಕಳೆದುಕೊಳ್ಳಲಾಯಿತು. ಈ ವೇಳೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿಕೊಟ್ಟು ಮನೆ ನಿರ್ಮಿಸಿಕೊಟ್ಟರು. ಹೀಗೆ ಸರ್ಕಾರದ ನೆರವಿನಿಂದ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಶಿವಮೊಗ್ಗದ ಮಹಿಳೆಯೊಬ್ಬರು ಪ್ರವಾಹದ ವೇಳೆ ಮನೆ ಕಳೆದುಕೊಂಡ ಪರಿಣಾಮ ನಮ್ಮ ಬದುಕು ಬೀದಿಗೆಬಿದ್ದಿತ್ತು. ಈ ವೇಳೆ ಸಿಎಂ ಯಡಿಯೂರಪ್ಪನವರು ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ಪರಿಹಾರ ಘೋಷಿಸಿದರು. ಪರಿಣಾಮ ಒಂದೇ ಕಂತಿನಲ್ಲಿ ಮೂರು ಲಕ್ಷ ಹಣ ಸಿಕ್ಕಿತ್ತು. ಇಂದು ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕೊಪ್ಪಳ ಜಿಲ್ಲೆ ಕುಷ್ಟಗಿಯ ಫಲಾನುಭವಿಯೊಬ್ಬರು ಲಾಕ್‍ಡೌನ್ ವೇಳೆ ನರೇಗಾದಿಂದ ಕೆಲಸ ಸಿಕ್ಕಿದ್ದರಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಯಿತು ಎಂದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಯುವತಿಯೊಬ್ಬಳು ಲಾಕ್‍ಡೌನ್ ವೇಳೆ ತಾವು ಬೆಳೆದಿದ್ದ ಈರುಳ್ಳಿಯನ್ನು ಯಾರೊಬ್ಬರೂ ಖರೀದಿಸಲು ಮುಂದೆ ಬಂದಿರಲಿಲ್ಲ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ.

ಈ ವೇಳೆ ಸಾಮಾಜಿಕ ಜಾಲತಾಣದಲ್ಲೂ ನಾನು ಮಾಡಿಕೊಂಡ ಮನವಿಗೆ ನೀವು ಸ್ಪಂದಿಸಿ ಈರುಳ್ಳಿ ಖರೀದಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿರಿ. ಪರಿಣಾಮ ಇಂದು ನೆಮ್ಮದಿಯಾಗಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಮಕೂರಿನ ಜಿಲ್ಲಾಸ್ಪತ್ರೆಯ ನರ್ಸ್‍ವೊಬ್ಬರು ನಾವು ಕೋವಿಡ್‍ನ್ನು ಯಾವ ರೀತಿ ಎದುರಿಸಿದೆನೆ ಎಂದು ಹೇಳಿದರೆ, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮಹಿಳೆಯೊಬ್ಬಳು ಮನೆ ಕಳೆದುಕೊಂಡು ಅನಾಥರಾಗಿದ್ದ ನಮಗೆ ಸರ್ಕಾರ ನೆರವು ನೀಡಿತು ಎಂದು ಸ್ಮರಿಸಿದರು.

ಹೀಗೆ ಬಹುತೇಕ ಫಲಾನುಭವಿಗಳು ರಾಜ್ಯ ಸರ್ಕಾರ ಸಂಕಷ್ಟದ ಸಂದರ್ಭದಲ್ಲಿ ನೀಡಿದ ನೆರವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

Facebook Comments

Sri Raghav

Admin