ಪ್ರತಿಭಟನೆ ಹೆಸರಲ್ಲಿ ಶಾಂತಿ ಹಾಳು ಮಾಡಿದರೆ ಸುಮ್ಮನಿರಬೇಡಿ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.19- ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸಲು ಮುಂದಾದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಒಂದು ವೇಳೆ ಶಾಂತಿಸುವ್ಯವಸ್ಥೆಗೆ ಧಕ್ಕೆ ತಂದರೆ ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಪೊಲೀಸರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಾಯ್ದೆ ವಿರೋಧಿಸಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು. ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಂ.ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್, ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್‍ಪಂಥ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಮಡಿಕೇರಿ, ಮೈಸೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ರಾಮನಗರ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಸಂಸ್ಥೆಗಳು ಪರಿಸ್ಥಿತಿಯ ಲಾಭ ಪಡೆಯುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡಬಾರದೆಂದು ಸೂಚನೆ ಕೊಟ್ಟರು.

ನನಗೆ ಪ್ರತಿದಿನ ಎರಡು ಬಾರಿ ಎಲ್ಲ ವಿಭಾಗದ ಮುಖ್ಯಸ್ಥರು ಕಾನೂನು ಸುವ್ಯವಸ್ಥೆ ಕುರಿತಂತೆ ವರದಿ ನೀಡಬೇಕು. ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ವಿಶೇಷವಾಗಿ ಕರಾವಳಿ ಮತ್ತು ಕೆಲವು ಕಡೆ ಕಾಯ್ದೆಗೆ ಕೆಲವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಹೇಗಾದರೂ ಮಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಷಡ್ಯಂತರ ನಡೆಸಿದ್ದಾರೆ.

ಈ ಬಗ್ಗೆ ಗುಪ್ತಚರ ವಿಭಾಗದಿಂದಲೂ ಮಾಹಿತಿ ಬಂದಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ದವಾಗಿರಬೇಕೆಂದು ಸಿಎಂ ಸಲಹೆ ಮಾಡಿದರು. ಶಾಲಾಕಾಲೇಜುಗಳು, ಖಾಸಗಿ ಕಚೇರಿಗಳು, ಐಟಿಬಿಟಿ ಕಂಪನಿಗಳು, ಮಾರುಕಟ್ಟೆ, ಮಾಲ್‍ಗಳು, ರೈಲ್ವೆ ಹಾಗೂ ಬಸ್ ನಿಲ್ದಾಣ, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್ ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಬೇಕು. ಅನುಮಾನಸ್ಪದವಾಗಿ ತಿರುಗಾಡುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಪ್ರತಿಭಟನೆಗೆ ಎಲ್ಲಿಯೂ ಅವಕಾಶ ಕೊಡಲೇಬಾರದು ಎಂದು ಸೂಚಿಸಿದ್ದಾಗಿ ತಿಳಿದುಬಂದಿದೆ.

ಶಾಂತಿ ಕದಡುವ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳ ಮೇಲೂ ಹದ್ದಿನ ಕಣ್ಣಿಡಿ. ನಮ್ಮ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಾದರೆ ಯಾರಿಗೂ ತೊಂದರೆಯಾಗುವುದಿಲ್ಲ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡುವವರ ಮೇಲೂ ಕಣ್ಣಿಡಬೇಕು. ಯಾರಿಗೂ ವಿನಾಯ್ತಿ ನೀಡಲೇಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ.

ಇನ್ನು ಸಭೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ. ಎಲ್ಲಿಯೂ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಬೆಂಗಳೂರಿನಲ್ಲಿ 144ನೇ ಸೆಕ್ಷನ್ ವಿಧಿಸಲಾಗಿದೆ. ಇದೇ ರೀತಿ ಬೇರೆ ಬೇರೆ ಭಾಗಗಳಲ್ಲೂ ಕ್ರಮ ಕೈಗೊಂಡಿದ್ದೇವೆ. ಬೇರೆ ಬೇರೆ ಭಾಗಗಳಲ್ಲೂ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Facebook Comments