ಹೈಕಮಾಂಡ್ ಜೊತೆ ಹಳಸಿದ ಯಡಿಯೂರಪ್ಪ ಸಂಬಂಧ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13-ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ದೆಹಲಿ ನಾಯಕರೊಂದಿಗಿನ ಸಂಬಂಧ ಹಳಸಿದೆಯೇ…? ಏಕೆಂದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದೆಹಲಿ ಬಿಜೆಪಿ ನಾಯಕರು ಮತ್ತು ಬಿಎಸ್‍ವೈ ನಡುವಿನ ಸಂಬಂಧ ಹಾವು-ಮುಂಗುಸಿ ಎಂಬಂತಾಗಿದೆ.

ದೆಹಲಿ ವಿಧಾನಸಭೆ ಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವಂತೆ ಬಿಜೆಪಿ ವರಿಷ್ಠರು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದು ಅದೇ ಕಾಲಕ್ಕೆ ಸಂಪುಟ ವಿಸ್ತರಿಸದಿದ್ದರೆ ನಾನು ವಚನದ್ರೋಹಿ ಎಂಬ ಪಟ್ಟ ಹೊರಬೇಕಾಗುತ್ತದೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿದ್ದು ದೆಹಲಿ ಭೇಟಿಯನ್ನು ಯಡಿಯೂರಪ್ಪ ಧಿಡೀರ್ ಎಂದು ರದ್ದು ಮಾಡಿರುವುದನ್ನು ಎತ್ತಿ ತೋರಿಸಿವೆ.

ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಆದರೆ ಇದಕ್ಕೆ ದೆಹಲಿ ವರಿಷ್ಠರು ಅನುಮತಿ ನೀಡದೆ ಯಡಿಯೂರಪ್ಪನವರನ್ನು ಸತಾಯಿಸುವ ಆಟವಾಡುತ್ತಿದ್ದಾರೆ.ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಯಡಿಯೂರಪ್ಪ ಹಾಗೂ ಸಂಘಪರಿವಾರದ ನಾಯಕರೊಬ್ಬರ ನಡುವಣ ಭಿನ್ನಾಭಿಪ್ರಾಯ ಪ್ರಮುಖವಾಗಿ ಕೆಲಸ ಮಾಡಿದ್ದು,ಸಧ್ಯಕ್ಕೆ ಈ ತಲೆನೋವೇ ಬೇಡ ಎಂದು ವರಿಷ್ಟರು ಬಯಸಿದ್ದಾರೆ.

ಇದೇ ಕಾರಣಕ್ಕಾಗಿ ದೆಹಲಿಗೆ ಭೇಟಿ ನೀಡಬೇಕಿದ್ದ ಯಡಿಯೂರಪ್ಪ ಅವರಿಗೆ ಸಿಗ್ನಲ್ ನೀಡಿ ಸ್ವಲ್ಪ ದಿನ ಕಳೆದ ನಂತರ ನಾವೇ ನಿಮಗೆ ಕರೆ ಮಾಡುತ್ತೇವೆ. ಆಗ ಬನ್ನಿ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ದೆಹಲಿ ನಾಯಕರು ಯಡಿಯೂರಪ್ಪನವರ ಕಾರ್ಯವೈಖರಿ, ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪ ಹಾಗೂ ಕುಟುಂಬ ಸದಸ್ಯರ ನಡುವಳಿಕೆ ಕುರಿತಂತೆ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅದರಲ್ಲೂ ತುಮಕೂರಿನಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ರಾಜ್ಯಕ್ಕೆ ನೆರೆ ಪರಿಹಾರ ನೀಡಬೇಕೆಂದು ಹೇಳಿದ್ದು, ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಮೂರು ದಿನಗಳ ಹಿಂದೆ ದೂರವಾಣಿ ಕರೆ ಮಾಡಿದ್ದ ಅಮಿತ್ ಷಾ, ರಾಜ್ಯದ ಪಾಲಿಗೆ ನೀವು ಹೀರೋ, ನಾವು ವಿಲನ್‍ಗಳೇ ಎಂದು ಪ್ರಶ್ನಿಸಿ ಯಡಿಯೂರಪ್ಪನವರ ಸಮರ್ಥನೆಯನ್ನೂ ಕೇಳದೆ ಫೋನ್ ಕಡಿತಗೊಳಿಸಿದ್ದರು ಎಂದು ತಿಳಿದುಬಂದಿದೆ.

ದೆಹಲಿಗೆ ಬಂದ ವೇಳೆ ನೆರೆ ಪರಿಹಾರ ಕೇಳಬಹುದಿತ್ತಲವೇ ಎಂದು ಅಮಿತ್ ಷಾ ಅಸಮಾಧಾನದಿಂದಲೇ ಮಾತು ಮುಕ್ತಾಯಗೊಳಿಸಿದ್ದಾರೆ. ಬಿಎಸ್‍ವೈ ದೆಹಲಿ ಭೇಟಿಗೆ ಅಮಿತ್ ಶಾ ನಿರಾಕರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ಭಾರೀ ನಿರಾಸೆಯಾಗಿದೆ. ಶುಕ್ರವಾರ ಅಮಿತ್ ಶಾ ಜೊತೆ ಸಿಎಂ ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುತ್ತಾರೆ ಎಂದು ಆಕಾಂಕ್ಷಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಇನ್ನೇನು ವನವಾಸ ಮುಗಿಯುತ್ತದೆ ಎಂದೇ ಅಂದುಕೊಂಡಿದ್ದರು. ಆದರೆ ಅರ್ಹ ಶಾಸಕರು ಮತ್ತು ಪಕ್ಷದ ಆಕಾಂಕ್ಷಿ ಶಾಸಕರ ನಿರೀಕ್ಷೆ ಮತ್ತೆ ಠುಸ್ ಆಗಿದೆ.

ಯಡಿಯೂರಪ್ಪರ ದೆಹಲಿ ಪ್ರವಾಸ ರದ್ದಾದ ಬೆನ್ನಲ್ಲೇ ಇದೇ ತಿಂಗಳು ಸಂಪುಟ ವಿಸ್ತರಣೆ ನಡೆಯುತ್ತದೆ ಎಂಬ ಭರವಸೆಯನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಇದೇ 18ಕ್ಕೆ ರಾಜ್ಯಕ್ಕೆ ಅಮಿತ್ ಷಾ ಆಗಮಿಸುತ್ತಿದ್ದು, ಈಗಲಾದರೂ ಸಂಪುಟ ವಿಸ್ತರಣೆಗೆ ಅವರು ಅನುಮತಿ ಕೊಡ್ತಾರಾಯೇ ಎಂದು ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ.

ನನ್ನನ್ನು ಯಾರೂ ನಂಬುವುದಿಲ್ಲ : ರಾಜ್ಯ ಸಚಿವ ಸಂಪುಟವನ್ನು ಶತಾಯಗತಾಯ ವಿಸ್ತರಿಸಲೇಬೇಕು ಎಂದು ಸಿಎಂ ಪಟ್ಟು ಹಿಡಿದಿದ್ದು ಸರ್ಕಾರ ರಚನೆಯಾದ 24 ಗಂಟೆಯೊಳಗೆ ಮಂತ್ರಿ ಮಾಡುವುದಾಗಿ ನಮಗೆ ನೆರವು ನೀಡಿದ ಶಾಸಕರಿಗೆ ಭರವಸೆ ನೀಡಿದ್ದೇವೆ. ಅವರಿಗೆ ಈಗ ಅವಕಾಶ ನೀಡದಿದ್ದರೆ ನಾಳೆ ಯಾರೂ ನನ್ನನ್ನು ನಂಬುವುದಿಲ್ಲ ಎಂಬುದು ಯಡಿಯೂರಪ್ಪನವರ ವಾದವಾಗಿದೆ.

ಮೂಲಗಳ ಪ್ರಕಾರ ಹಾಲಿ ಸಚಿವ ಸಂಪುಟದಲ್ಲಿರುವ ಕೆಲವರನ್ನು ಕೈ ಬಿಡಬೇಕು. ಇನ್ನು ಕೆಲವರನ್ನು ಸೇರಿಸಿಕೊಳ್ಳಬೇಕು ಎಂದು ಸಂಘಪರಿವಾರದ ನಾಯಕರೊಬ್ಬರು ಬಿಗಿಪಟ್ಟು ಹಿಡಿದಿದ್ದು, ಅವರ ಪಟ್ಟಿಗೆ ಪ್ರತಿಯಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಂತವರನ್ನು ಕೈ ಬಿಡಲು ಯಡಿಯೂರಪ್ಪ ಒಲವು ತೋರಿದ್ದಾರೆ.

ಆದರೆ ಲಕ್ಷ್ಮಣ ಸವದಿ,ಬಸವರಾಜ ಬೊಮ್ಮಾಯಿ ಸಂಘಪರಿವಾರದ ನಾಯಕರ ಬೆಂಬಲದಿಂದ ಸಚಿವ ಸಂಪುಟ ಸೇರಿದ್ದು ಅವರನ್ನು ಕೈ ಬಿಡಬಾರದು. ಬದಲಿಗೆ ಇಂತಿಂತವರನ್ನು ಕೈ ಬಿಡಿ ಎಂದು ಯಡಿಯೂರಪ್ಪ ಅವರ ಬೆಂಬಲಿಗರ ಮೇಲೆ ಸಂಘಪರಿವಾರದ ನಾಯಕರು ಬೆರಳು ತೋರಿಸಿದ್ದಾರೆ. ಹೀಗಾಗಿ ಮಂತ್ರಿ ಮಂಡಲಿ ವಿಸ್ತರಣೆಯ ವಿಷಯದಲ್ಲಿ ಯಡಿಯೂರಪ್ಪ ಹಾಗೂ ಸಂಘಪರಿವಾರದ ಈ ನಾಯಕರ ನಡುವೆ ಜಟಾಪಟಿ ನಡೆದಿದ್ದು ಇದರ ಪರಿಣಾಮವಾಗಿ ಬಿಜೆಪಿ ಹೈಕಮಾಂಡ್ ಸಧ್ಯಕ್ಕೆ ವಿಸ್ತರಣೆಯೇ ಬೇಡ ಎಂದು ಕುಳಿತಿದೆ.

ಆದರೆ ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಸೇರಿದಂತೆ ಬೇರೆ ಪಕ್ಷಗಳಿಂದ ಬಂದು ಗೆದ್ದಿರುವ ಶಾಸಕರನೇಕರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದು,ತಕ್ಷಣ ನಮ್ಮನ್ನು ಮಂತ್ರಿಗಳನ್ನಾಗಿ ಮಾಡಿ.ವಿಳಂಬವಾಗುವುದಾದರೆ ಹೇಳಿ. ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನಾವು ಬೇರೆ ಪಕ್ಷಗಳ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದೆವು.ಉಪಚುನಾವಣೆಯನ್ನು ಎದುರಿಸಿದೆವು.ಇಷ್ಟೆಲ್ಲ ಆದರೂ ನೀವು ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಲೇ ಬಂದಿದ್ದೀರಿ.

ಈ ವಿಳಂಬ ಮುಂದುವರಿದರೆ ನಮ್ಮ ದಾರಿ ನೋಡಿಕೊಳ್ಳುತ್ತೇವೆ ಎಂದು ರಮೇಶ್ ಜಾರಕಿಹೊಳಿ ಗ್ಯಾಂಗ್ ಬೆದರಿಕೆ ಒಡ್ಡಿದ್ದು ಅವರನ್ನು ಸಮಾಧಾನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡುವ ಸ್ಥಿತಿ ಬಂದಿದೆ. ಇದೇ ಕಾರಣಕ್ಕಾಗಿ ಜನವರಿ ಎರಡನೇ ವಾರ ದೆಹಲಿಗೆ ಹೋಗುತ್ತೇನೆ. ಮೂರನೇ ವಾರ ಮಂತ್ರಿ ಮಂಡಲ ವಿಸ್ತರಿಸುತ್ತೇನೆ ಎಂದು ಈ ಶಾಸಕರಿಗೆ ಯಡಿಯೂರಪ್ಪ ಭರವಸೆ ನೀಡಿದ್ದರಾದರೂ ಇದೀಗ ಪಕ್ಷದ ವರಿಷ್ಠರು ದೆಹಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ವಿಸ್ತರಣೆ ಬೇಡ ಎಂದು ಕೈ ಚೆಲ್ಲಿದ್ದಾರೆ.

Facebook Comments