ಬೀಸೋ ದೊಣ್ಣೆಯಿಂದ ಬಚಾವ್, ಬಿಎಸ್‍ವೈ ಮತ್ತಷ್ಟು ಗಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಸಚಿವ ಸ್ಥಾನ ಒತ್ತಡದಿಂದ ತಪ್ಪಿಸಿಕೊಳ್ಳಲು ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯತಂತ್ರ ಯಶಸ್ವಿಯಾಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ನಿನ್ನೆ ಹಲವು ನಿಗಮಗಳು ಮತ್ತು ಪ್ರಾಧಿಕಾರಗಳಿಗೆ ಸಿಎಂ ಯಡಿಯೂರಪ್ಪ ನವರು ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ.

ಇದರ ಹಿಂದೆ ದೊಡ್ಡ ರಾಜಕೀಯ ತಂತ್ರ ಅಡಗಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಸಚಿವ ಸ್ಥಾನ ಸಿಗದೆ ಬಂಡಾಯದ ಕಹಳೆ ಊದಬಹುದೆಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ರಾಜಕೀಯ ಚಾಣಾಕ್ಷತನ ಮೆರೆದಿರುವ ಯಡಿಯೂರಪ್ಪನವರು ಕೆಲವು ನಿಗಮಗಳಿಗೆ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಪ್ರಮುಖರನ್ನು ನೇಮಕ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಲು ಪ್ರಮುಖ ಪಾತ್ರವಹಿಸಿದ್ದ 17 ಶಾಸಕರಲ್ಲಿ 16 ಮಂದಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಗೆದ್ದು ಮಂತ್ರಿಗಳಾಗಿದ್ದಾರೆ. ಆದರೆ ಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ವಿಧಾನಸಭೆಯಲ್ಲಿ ಸ್ರ್ಪಸದೆ ಬೇರೊಬ್ಬ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದ ಆರ್.ಶಂಕರ್ ಸದ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ.

ಆದರೆ ಇವರ ಹೊರತಾಗಿಯೂ ಹಲವು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಸಚಿವ ಸ್ಥಾನಕ್ಕಾಗಿ ತೀವ್ರ ಪಟ್ಟು ಹಿಡಿದಿದ್ದು, ಇವರನ್ನು ಸಮಾಧಾನಪಡಿಸಲು ಸಚಿವ ಸಂಪುಟ ವಿಸ್ತರಣೆಗೆ ಮುನ್ನವೇ, ಪ್ರಮುಖ ಹಾಗೂ ಆಯಕಟ್ಟಿನ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ನೇಮಕ ಮಾಡಲಾಗಿದೆ.

ನಿನ್ನೆ ಸಂಜೆಯ ನಂತರ ಒಂದರ ನಂತರ ಒಂದರಂತೆ ನಿಗಮಗಳಿಗೆ ಆದೇಶ ಹೊರಬಿದ್ದಿದೆ. ಅಂತಿಮವಾಗಿ ಒಟ್ಟು 33 ನಿಗಮ ಮಂಡಳಿ, 2 ಆಯೋಗ, 2 ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ನೇಮಕದಲ್ಲಿ 24 ಶಾಸಕರು ಇರುವುದು ಪ್ರಮುಖವಾದರೆ, ಉಳಿದಂತೆ ಹೆಚ್ಚಿನವರು ಇತ್ತೀಚಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ನಾಯಕರು ಆಗಿದ್ದಾರೆ.

ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾದವರಲ್ಲಿ ಪ್ರಮುಖವಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ಸೋಲಾಪುರ ಶಾಸಕ ನರಸಿಂಹನಾಯಕ (ರಾಜುಗೌಡ), ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ಮುದ್ದೇಬಿಹಾಳ ಶಾಸಕ ಎಸ್ ಪಾಟೀಲ್ ನಡಹಳ್ಳಿ, ಸಾಗರ ಶಾಸಕ ಹಾಲಪ್ಪ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ,

ದೇವದುರ್ಗ ಶಾಸಕ ಶಿವನಗೌಡ ನಾಯಕ್, ರೋಣ ಶಾಸಕ ಕಳಕಪ್ಪ ಬಂಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ತೇರದಾಳ ಶಾಸಕ ಸಿದ್ದು ಸವದಿ, ಹಾಸನ ಶಾಸಕ ಪ್ರೀತಮ್ ಗೌಡ, ಯಲಹಂಕ ಶಾಸಕ ಹೆಚ್ ವಿಶ್ವನಾಥ್, ದುರ್ಯೋಧನ ಐಹೊಳೆ ಮತ್ತಿತರ ಪ್ರಮುಖ ಶಾಸಕರು ಸೇರಿದ್ದಾರೆ.

ಒಟ್ಟಾರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಉಂಟಾಗಬಹುದಾದ ಅಸಮಾಧಾನ ಶಮನಕ್ಕೆ ಬಿಎಎಸ್‍ವೈ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ತೀವ್ರ ಸಚಿವಾಕಾಂಕ್ಷಿಗಳು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಾರೆ ಅಥವಾ ಹುದ್ದೆ ಅಲಂಕರಿಸಲು ನಿರಾಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Facebook Comments