ನಿಗಮ, ಪ್ರಾಧಿಕಾರಕ್ಕೆ ಹೆಚ್ಚಿದ ಬೇಡಿಕೆಗಳು : ಸಿಎಂ ಬಿಎಸ್‌ವೈಗೆ ತಲೆ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ ಬೆನ್ನಲ್ಲೇ ಇದೀಗ ನೇಕಾರರು, ಕುರುಬರು ಕೂಡಾ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಸಿಎಂಗೆ ಎರಡೆರಡು ಸಮುದಾಯಗಳ ಬೇಡಿಕೆ ಈಡೇರಿಸುವ ತಲೆ ಬಿಸಿ ಪ್ರಾರಂಭವಾಗಿದೆ.

ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕುರುಬ ಸಮುದಾಯದ ಕಾಗಿನೆಲೆ ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ಮುಖಂಡರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಶಿಫಾರಸು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈಗಾಗಲೇ ದೆಹಲಿಯಲ್ಲಿ ಈ ಸಂಬಂಧ ಸ್ವಾಮೀಜಿಗಳು ಕೇಂದ್ರ ಸಚಿವರು ಹಾಗೂ ಹೈಕಮಾಂಡ್‍ಅನ್ನು ಭೇಟಿ ಮಾಡಿದ್ದರು.

ಕಾಗಿನೆಲೆ ಪೀಠದ ಸ್ವಾಮೀಜಿಗಳ ಜತೆ ಕುರುಬ ಸಮುದಾಯದ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಶಂಕರ್ ಕೂಡಾ ಹಾಜರಿದ್ದರು. ಚರ್ಚೆ ವೇಳೆ ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಕೂಡಾ ಇದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ಈ ಬಗ್ಗೆ ತಕ್ಷಣ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಹೇಳಿದ್ದೇವೆ.

ಕುರುಬ ಅಭಿವೃದ್ಧಿ ಪ್ರಾಕಾರ ಮಾಡಿ 500 ಕೋಟಿ ರೂ. ಮೀಸಲಿಡಬೇಕು. ನೀವು ಮುಖ್ಯಮಂತ್ರಿಯಾಗಲು ಕಾರಣೀಕರ್ತರಾದವರಿಗೆ ಮಂತ್ರಿ ಸ್ಥಾನ ನೀಡಬೇಕು. ಈಗಾಗಲೇ ಒಬ್ಬರಿಗೆ ಮಂತ್ರಿ ಮಾಡಿದ್ದೀರಿ. ಇನ್ನುಳಿದ ಮೂವರಿಗೆ ಮಂತ್ರಿ ಮಾಡಬೇಕೆಂದು ಆಗ್ರಹ ಮಾಡಿ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ನೇಕಾರರ ಸಮಾಜಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆ ಸಮುದಾಯದ ಸ್ವಾಮೀಜಿಗಳು ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಹಲವಾರು ಸಮುದಾಯಗಳು ಅಭಿವೃದ್ಧಿ ನಿಗಮಗಳನ್ನು ರಚಿಸುವಂತೆ, ಮೀಸಲಾತಿ ನೀಡುವಂತೆ ಒತ್ತಡ ಹೇರುತ್ತಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೊಸ ತಲೆ ಬಿಸಿಗಳು ಪ್ರಾರಂಭವಾಗಿವೆ.

Facebook Comments