ಲೈಸೆನ್ಸ್ ಪಡೆದವರಿಗೆ ಮಾತ್ರ ಗಣಿಗಾರಿಕೆ ನಡೆಸಲು ಅವಕಾಶ : ಸಿಎಂ
ಬೆಂಗಳೂರು,ಜ.23-ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರವಾನಗಿ ಹೊಂದಿರುವವರು ಮಾತ್ರ ಕಾನೂನಿನ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಹುದು. ಸರ್ಕಾರದಿಂದ ಅನುಮತಿ ಪಡೆಯದೇ ಯಾರಾದರೂ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಲೈಸೆನ್ಸ್ ಪಡೆದವರು ಗಣಿಗಾರಿಕೆ ನಡೆಸಲು ನಮ್ಮದೇನು ಅಭ್ಯಂತರವಿಲ್ಲ. ಪರವಾನಗಿ ಇಲ್ಲದೆ ಗಣಿಗಾರಿಕೆ ನಡೆಸುವವರ ಮೇಲೆ ಹದ್ದಿನ ಕಣ್ಣಿಡಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಕಾನೂನು ವ್ಯಾಪ್ತಿ ಮೀರಿದರೆ ಯಾವುದೇ ಪ್ರಭಾವಿಗಳಿರಲಿ ಎಷ್ಟೇ ದೊಡ್ಡವರಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ಸಂಭವಿಸಿದ ಘಟನಾ ಸ್ಥಳಕ್ಕೆ ಇಂದು ನಾನೇ ಭೇಟಿ ನೀಡುತ್ತೇನೆ. ಈಗಾಗಲೇ ಅಧಿಕಾರಿಗಳಿಂದ ಎಲ್ಲ ಮಾಹಿತಿಯನ್ನು ಪಡೆದಿದ್ದೇನೆ. ತಪ್ಪಿತಸ್ಥರು ಯಾರೇ ಇದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಳು ವಿಚಾರಣೆ ನಂತರ ಹೊರಬರಬೇಕಿದೆ ಎಂದರು.
ಸಂಜೆ ಖುದ್ದು ಹುಣಸೋಡಿಗೆ ತೆರಳುತ್ತಿದ್ದು, ಪರಿಸ್ಥಿತಿಯನ್ನು ಪರಾಮರ್ಶಿಸುತ್ತೇನೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವನ್ನೂ ತೆಗೆದುಕೊಳ್ಳಲಾಗುವುದ. ಇಂಥ ಅವಘಡಗಳು ಸಂಭವಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
# ಬಜೆಟ್ ಗಾತ್ರ
ಮೈಸೂರು,ಜ.23- ಈ ಬಾರಿ ಬಜೆಟ್ ಗಾತ್ರವನ್ನು ತಗ್ಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಪನ್ಮೂಲ ಕೊರತೆ ಕಾರಣ ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯ ಎಂದು ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಗಣಿ ಸ್ಫೋಟದ ಸ್ಥಳಕ್ಕೆ ಇಂದು ಭೇಟಿ ನೀಡುತ್ತೇನೆ. ಈ ಘಟನೆಯಲ್ಲಿ ಜಖಂ ಆಗಿರುವ ಮನೆಗಳನ್ನು ಪರಿಶೀಲಿಸಿ ಮನೆಗಳ ಮಾಲೀಕರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಹಾಕಿ ಅದನ್ನು ಸಕ್ರಮ ಮಾಡಿಕೊಳ್ಳಿ. ಇಲ್ಲವೆಂದರೆ ಸ್ಥಳ ತನಿಖೆ ಮಾಡಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಈ ಮೂಲಕ ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಯವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತಿತರರು ಆಗಮಿಸಿದರು.