ಸಿಎಲ್‍ಪಿ ತೀರ್ಮಾನಕ್ಕೆ ಗಟ್ಟಿಯಾಗಿ ನಿಂತ ಸಿದ್ದು, ಸಿಎಂ ಸಂಧಾನ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29-ಸದನ ಸಲಹಾ ಸಮಿತಿ(ಬಿಎಸ್‍ಸಿ) ಸಭೆಗೆ ಪ್ರತಿಪಕ್ಷಗಳ ಸದಸ್ಯರು ಭಾಗವಹಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ನಡೆಸಿದ ಸಂಧಾನ ಸಭೆ ಮತ್ತೆ ವಿಫಲವಾಗಿದೆ. ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಯಡಿಯೂರಪ್ಪನವರು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಿದರು. ಏನೇ ಸಮಸ್ಯೆಗಳಿದ್ದರೂ ಮಾತುಕತೆ ಮೂಲಕ ಇಲ್ಲವೇ ಚರ್ಚೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳೋಣ, ಸದನ ಸಲಹಾ ಸಮಿತಿ ಕಲಾಪ ಬಹಿಷ್ಕರಿಸುವ ನಿಮ್ಮ ತೀರ್ಮಾನವನ್ನು ಹಿಂತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಪಕ್ಷಗಳು ಭಾಗವಹಿಸದೆ ಬಿಎಸ್‍ಸಿ ಸಭೆ ನಡೆಸುವುದು ಅಷ್ಟು ಸಮಂಜಸವಲ್ಲ. ನಿಮ್ಮ ತೀರ್ಮಾನವನ್ನು ಮತ್ತೊಮ್ಮೆ ಪರಿಶೀಲಿಸಿ. ಸರ್ಕಾರಕ್ಕೆ ಅಗತ್ಯವಾಗಿರುವ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಮಾಡಬೇಕೆಂದು ಕೋರಿದರು. ಸಭೆಯಲ್ಲಿ ಕೆಲವು ಬದಲಾವಣೆ ಮಾಡುವ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರ ಸಲಹೆ ಅಗತ್ಯವಾಗಿರುತ್ತದೆ. ಹಿಂದೆ ಪ್ರತಿಪಕ್ಷಗಳು ಈ ರೀತಿ ಬಹಿಷ್ಕಾರ ಮಾಡಿದ ನಿದರ್ಶನಗಳಿಲ್ಲ. ಏನೇ ಸಮಸ್ಯೆ ಅಥವಾ ಅಸಮಾಧಾನವಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ನೀವು ಬಿಎಸ್‍ಸಿಯನ್ನು ಬಹಿಷ್ಕರಿಸುವುದು ಸರಿಯಲ್ಲ ಎಂದರು.

ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯನವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳ ಪಾತ್ರ ಏನೆಂಬುದು ನನಗೂ ಗೊತ್ತಿದೆ. ನಾವು ಸುಖಾಸುಮ್ಮನೆ ಸದನ ಸಲಹಾ ಸಮಿತಿ ಸಭೆಗೆ ಬಹಿಷ್ಕಾರ ಮಾಡುವ ತೀರ್ಮಾನಕ್ಕೆ ಬಂದಿಲ್ಲ. ನೀವು ಕಾರ್ಯಕಲಾಪ ಪಟ್ಟಿಯಲ್ಲಿ ಇಲ್ಲದ ಕಾಯ್ದೆಗಳನ್ನು ಸೇರ್ಪಡೆ ಮಾಡಬೇಕಾದರೆ ನಮ್ಮ ಜೊತೆ ಚರ್ಚಿಸಬೇಕು. ಏಕಾಏಕಿ ತೀರ್ಮಾನಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಳೆದ ಅಧಿವೇಶನದ ಸಂದರ್ಭದಲ್ಲಿ ನೀವು ಕರ್ನಾಟಕ ಗೋಹತ್ಯೆ ಮಸೂದೆ ಕಾಯ್ದೆಯನ್ನು ಮಂಡಿಸುವ ಬಗ್ಗೆ ನಮಗೆ ಮಾಹಿತಿಯನ್ನೇ ನೀಡಿರಲಿಲ್ಲ. ಕಡೆಪಕ್ಷ ಈ ಮಸೂದೆಯನ್ನು ಮಂಡನೆ ಮಾಡುವ ಬಗ್ಗೆ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲ. ಪ್ರತಿಪಕ್ಷಗಳ ಜೊತೆ ಚರ್ಚಿಸದೆ ಮಸೂದೆಗಳನ್ನು ಮಂಡಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ನಾವು ಈಗಾಗಲೇ ತೀರ್ಮಾನ ಮಾಡಿರುವಂತೆ ಯಾವುದೇ ಸದನ ಸಲಹಾ ಸಮಿತಿ ಸಭೆಗೆ ಭಾಗವಹಿಸುವುದಿಲ್ಲ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೀಗೆ ಪ್ರತಿಪಕ್ಷಗಳ ಸದಸ್ಯರ ಮನವೊಲಿಸುವ ಮುಖ್ಯಮಂತ್ರಿಗಳ ಸಂಧಾನ ವಿಫಲವಾಗಿದೆ ಎಂದು ತಿಳಿದುಬಂದಿದೆ.

Facebook Comments