ಪಂಚಮಸಾಲಿ ಹೋರಾಟದಲ್ಲಿ ಕಾಣಿಸಿಕೊಳ್ಳದಂತೆ ನಾಯಕರಿಗೆ ಸಿಎಂ ಕಟ್ಟಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.26- ಹಿಂದುಳಿದ ವರ್ಗ 2ಎಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಲಿಂಗಾಯಿತ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟದಲ್ಲಿ ಇನ್ನು ಮುಂದೆ ಪಕ್ಷದ ಯಾವುದೇ ಮುಖಂಡರು ಗುರುತಿಸಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಸಚಿವರು, ಶಾಸಕರು ಇಲ್ಲವೇ ಪಕ್ಷದ ಮುಖಂಡರು ಯಾರೇ ಆಗಲಿ ಯಾವುದೇ ಕಾರಣಕ್ಕೂ ಲಿಂಗಾಯಿತ ಪಂಚಮಸಾಲಿ ವೇದಿಕೆಯಲ್ಲಿ ಕಾಣಿಸಿಕೊಳ್ಳಬಾರದು.

ಹಾಗೊಂದು ವೇಳೆ ಹೋರಾಟದಲ್ಲಿ ಕಾಣಿಸಿಕೊಂಡರೆ ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತೀಚೆಗೆ ಕೆಲವರು ಬಹಿರಂಗವಾಗಿಯೇ ಸಮಾವೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸರಿಯಲ್ಲ. ಸಚಿವರಾಗಿ ನೀವೇ ವೇದಿಕೆ ಹತ್ತಿದರೆ ಸಾರ್ವಜನಿಕರಿಗೆ ಏನು ಸಂದೇಶ ಹೋಗುತ್ತದೆ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಕೆಲವರು ಈ ಸಮಾವೇಶವನ್ನು ನಡೆಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟ್ಟಿದ್ದಾರೆ. ಅಂತಹದುರ ನಡುವೆ ನೀವೇ ಹೋಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಸರಿಯೇ ಎಂದು ಲಿಂಗಾಯಿತ ಪಂಚಮಸಾಲಿ ಸಮುದಾಯದ ಬಿಜೆಪಿ ಮುಖಂಡರನ್ನು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ. ಹಿಂದೆ ಕಾಂಗ್ರೆಸ್ ಆಡಳಿತ ನಡೆಸುವಾಗ ಇದರ ಬಗ್ಗೆ ಯಾರೊಬ್ಬರೂ ಚಕಾರ ಎತ್ತಿರಲಿಲ್ಲ. ಈಗ ನಮ್ಮ ಸರ್ಕಾರಕ್ಕೆ ಕಪ್ಪುಚುಕ್ಕೆ ತರಬೇಕೆಂಬ ಒಂದೇ ಕಾರ ಣಕ್ಕಾಗಿ ಕೆಲವರು ಇಂತಹ ಹುನ್ನಾರ ನಡೆಸುತ್ತಿದ್ದಾರೆ. ನೀವು ಅವರ ಜೊತೆ ಹೋಗಿ ವೇದಿಕೆಯಲ್ಲಿ ಗುರುತಿಸಿಕೊಂಡರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಸಾರ್ವಜನಿಕರಿಗೇ ಏನು ಉತ್ತರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿತಂತ್ರ: ರಾಜಕೀಯದಲ್ಲಿ ಲಿಂಗಾಯಿತ ಪಂಚಮಸಾಲಿ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಈ ಹೋರಾಟವನ್ನು ಹತ್ತಿಕ್ಕಲು ರಣತಂತ್ರ ರೂಪಿಸಿದ್ದಾರೆ. ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನರ್ ಪ್ರಾಯೋಜಕತ್ವದಂತಿರುವ ಹೋರಾಟವನ್ನು ಹತ್ತಿಕ್ಕಿಲು ಈಗಾಲಗೇ ಕಾರ್ಯೋನ್ಮುಖರಾಗಿದ್ದಾರೆ.

ಇದರ ಮೊದಲ ಹೆಜ್ಜೆಯಾಗಿ ಪಂಚಮಸಾಲಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಹಾಗೂ ಬಿಜೆಪಿ ಪ್ರತಿನಿಧಿಸುವ ಶಾಸಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿ, ಬಸವನಗೌಡ ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರ್ ವಿರುದ್ಧ ಟೀಕಾ ಪ್ರಹಾ ನಡೆಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಸಚಿವರು ಮತ್ತು ಶಾಸಕರನ್ನು ನಿಯಂತ್ರಿಸುವ ಮೂಲಕ ಹೋರಾಟವನ್ನು ವಿಫಲಗೊಳಿಸಲು ಲೆಕ್ಕಾಚಾರ ಹಾಕಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಶ್ರೀಗಳ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು. ಆದರೆ ಸ್ವಾಮೀಜಿಯವರು ಇದಕ್ಕೆ ಒಪ್ಪದೆ ಸರ್ಕಾರದ ಯಾವುದೇ ಸಂಧಾನಕ್ಕೂ ಬಗ್ಗೆ ತಾವು ಕೈಗೊಂಡಿರುವ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ಬಿಎಸ್‍ವೈ ಅವರು ಹೋರಾಟದ ದಿಕ್ಕು ತಪ್ಪಿಸುವತ್ತ ಕಾರ್ಯೋನ್ಮುಖರಾಗಿದ್ದಾರೆ. ಪಕ್ಷದ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಹೋರಾಟದ ಹಾದಿ ಬದಲಾಯಿಸಲು ಸಿಎಂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Facebook Comments