ವಿಧಾನಸೌಧದ ಪ್ರತಿಪಕ್ಷದ ನಾಯಕರ ಕಚೇರಿ ಮರೆತ ಯಡಿಯೂರಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.28- ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಆಡಳಿತ ಕೇಂದ್ರದಲ್ಲಿರುವ ತಮ್ಮ ಕಛೇರಿಯನ್ನು ಮರೆತೇ ಬಿಟ್ಟಿರುವುದು ಬಿಜೆಪಿ ಪಾಳೆಯದಲ್ಲೇ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿಯಾಗುವ ಮುನ್ನ ಪ್ರತಿಪಕ್ಷ ನಾಯಕರಾಗಿದ್ದಾಗ ವಿಧಾನಸಭೆಯ ಮೊದಲ ಅಂತಸ್ತಿನಲ್ಲಿದ್ದ ತಮ್ಮ ಕೊಠಡಿಯಲ್ಲಿ ಮೇಲಿಂದ ಮೇಲೆ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ಲೋಪ ದೋಷಗಳನ್ನು ಎತ್ತಿ ತೋರಿಸುತ್ತಿದ್ದ ಯಡಿಯೂರಪ್ಪ ಇದೀಗ ಆ ಕಛೇರಿಯ ಕಡೆ ನೋಡುವುದನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ.

ಆ ಕೊಠಡಿ ಈಗ ಸರ್ಕಾರದ ಲೋಪ ದೋಷಗಳ ಬಗ್ಗೆ,ಜನಸಾಮಾನ್ಯರು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾತನಾಡಲು ಅವರಿಗೆ ವೇದಿಕೆಯಾಗಿ ಉಳಿದಿಲ್ಲ.ಬದಲಿಗೆ ಅದೀಗ ವಿಧಾನಮಂಡಲ ಅಧಿವೇಶನ ನಡೆಯುವ ಕಾಲದಲ್ಲಿ ಬಳಕೆ ಯಾಗುವ ರೆಸ್ಟ್ ರೂಮ್ ಆಗಿ ಬದಲಾಗಿದೆ.

ಎಸ್.ಶಿವಪ್ಪ ಪ್ರತಿಪಕ್ಷದ ನಾಯಕರಾಗಿದ್ದ ಕಾಲದಿಂದ ಶುರುವಾಗಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕರ ಕಛೇರಿ ಇತಿಹಾಸದಲ್ಲೇ ಮೊದಲ ಬಾರಿ ಬಿಕೋ ಎನ್ನುತ್ತಿರುವುದು ಬಿಜೆಪಿಯ ಹಲವು ನಾಯಕರಿಗೇ ವಿಷಾದದ ವಿಷಯವಾಗಿ ಪರಿಣಮಿಸಿದೆ.

ಹಿಂದೆ ಹಲ ಬಾರಿ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಕನಿಷ್ಟ ಪಕ್ಷ ವಾರಕ್ಕೊಮ್ಮೆ,ಇಲ್ಲವಾದರೆ ತಿಂಗಳಿಗೆ ಆರೇಳು ಬಾರಿಯಾದರೂ ಸುದ್ದಿಗೋಷ್ಟಿ ನಡೆಸಿ ಆಳುವ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.ಜನರ ಸಮಸ್ಯೆಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸುತ್ತಿದ್ದರು.

ಪ್ರಧಾನಿ ಪಿ.ವಿ.ನರಸಿಂಹ ರಾಯರಿಗೆ ಆಪ್ತರಾಗಿರುವವರಿಗೆ ಬೆಂಗಳೂರಿನ ಹೊರವಲಯದಲ್ಲಿ ಭಾರೀ ಬೆಲೆ ಬಾಳುವ ಭೂಮಿಯನ್ನು ಅಗ್ಗದ ಬೆಲೆಗೆ ರೆಸಾರ್ಟ್ ನಿರ್ಮಾಣಕ್ಕೆ ನೀಡಲಾಗಿದೆ ಎಂಬ ಆರೋಪದಿಂದ ಹಿಡಿದು ಹತ್ತು ಹಲವು ಹಗರಣಗಳ ಬಗ್ಗೆ ಇದೇ ಕೊಠಡಿಯಲ್ಲಿ ಕೆಂಡ ಕಾರಿದ್ದ ಯಡಿಯೂರಪ್ಪ ಅವರೀಗ ಆ ಕೊಠಡಿಗೆ ಗೌರವಾನ್ವಿತ ಅತಿಥಿಯಂತಾಗಿ ಹೋಗಿದ್ದಾರೆ.

ಪಕ್ಷಕ್ಕೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಭವ್ಯ ಕಛೇರಿ ಇದೆಯಾದರೂ ಹಿಂದೆ ಕೂಡಾ ಪಕ್ಷಕ್ಕೆ ಕಛೇರಿ ಅಂತಿತ್ತು. ಆದರೂ ಆಡಳಿತ ಕೇಂದ್ರವಾದ ವಿಧಾನಸೌಧದ ತಮ್ಮ ಕಛೇರಿಗೆ ಯಡಿಯೂರಪ್ಪ ಬಂದು ಕುಳಿತರೆ ಅದಕ್ಕೊಂದು ಖದರ್ರೂ ಇರುತ್ತಿತ್ತು. ಅಂದು ಮುಖ್ಯಮಂತ್ರಿಗಳಾಗಿದ್ದವರ ಕಛೇರಿ ಹೇಗೆ ಗಿಜಿಗುಡುತ್ತಿತ್ತೋ?ಹಾಗೆಯೇ ಅವತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದರೂ ಯಡಿಯೂರಪ್ಪ ಅವರ ಕಛೇರಿ ಜನಜಂಗುಳಿಯಿಂದ ತುಂಬಿರುತ್ತಿತ್ತು.

ವಿರೂಪಾಕ್ಷಯ್ಯ,ರಂಗರಾಜು ಅವರಂತಹ ದಕ್ಷ ಅಧಿಕಾರಿಗಳು ಕೂಡಾ ರಾಜ್ಯದ ಸಮಸ್ಯೆಗಳ ಕುರಿತು ಹಲವು ಮೂಲಗಳಿಂದ ಮಾಹಿತಿ ಪಡೆಯುತ್ತಾ,ಕಾಲ ಕಾಲಕ್ಕೆ ಈ ಮಾಹಿತಿಯನ್ನು ಯಡಿಯೂರಪ್ಪ ಅವರಿಗೆ ಒದಗಿಸುತ್ತಾ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಕಛೇರಿಗೆ ಶೋಭೆ ನೀಡಿದ್ದರು.

ಹೀಗೆ ಸದಾ ಸಕ್ರಿಯವಾಗಿರುತ್ತಿದ್ದ ಯಡಿಯೂರಪ್ಪ ಅವರಿಂದಾಗಿ ಆ ಕೊಠಡಿಯ ಮೇಲೆ ಸರ್ಕಾರ ಕೂಡಾ ನಿರಂತರವಾಗಿ ನಿಗಾ ಇಡುವ ಸ್ಥಿತಿ ಇರುತ್ತಿತ್ತು.ಯಾವ ಹೊತ್ತಿನಲ್ಲಿ ಯಡಿಯೂರಪ್ಪ ತಮ್ಮ ವಿರುದ್ಧ ದಾಳಿ ನಡೆಸುತ್ತಾರೋ?ಎಂದು ಸರ್ಕಾರದ ಪ್ರಮುಖರು ಎಚ್ಚರದಿಂದ ಗಮನಿಸುವ ಸ್ಥಿತಿಯಿರುತ್ತಿತ್ತು.

ಆದರೆ ಈಗ ವಿಧಾನಸೌಧದ ಮೊದಲ ಅಂತಸ್ತಿನಲ್ಲಿರುವ (ಹೈಕೋರ್ಟ್ ಎದುರು ಭಾಗ) ಯಡಿಯೂರಪ್ಪ ಅವರ ಕಛೇರಿಯ ಬಳಿ ಯಡಿಯೂರಪ್ಪ ಅವರ ಸುಳಿವೂ ಇಲ್ಲ.ಅವರನ್ನು ನೋಡಲು ಇನ್ನು ಜನ ಬರುವ ಮಾತೇ ಇಲ್ಲ. ವಿಧಾನಸಭೆಯ ಇತಿಹಾಸ ಬಲ್ಲವರ ದೃಷ್ಟಿಯಲ್ಲಿ ವಿಪಕ್ಷ ನಾಯಕರ ಕಛೇರಿಗೆ ಇತ್ತೀಚಿನ ದಶಕಗಳಲ್ಲಿ ದೊಡ್ಡ ಮಟ್ಟದ ಜೀವಕಳೆ ನೀಡಿದವರಲ್ಲಿ ಯಡಿಯೂರಪ್ಪ ನಂಬರ್ ಒನ್.ಹಾಗೆಯೇ ಆ ಕಛೇರಿಗೆ ನಿರ್ಜೀವದ ಕಳೆ ಕೊಟ್ಟವರಲ್ಲಿಯೂ ಯಡಿಯೂರಪ್ಪ ನಂಬರ್ ಒನ್.

ಪಕ್ಷದ ಕಛೇರಿ ಇರಲಿ,ಪ್ರವಾಸದಲ್ಲಿರುವಾ ಗಲೇ ಆಗಲಿ.ಅವರು ಸರ್ಕಾರದ ಲೋಪ ದೋಷಗಳ ಬಗ್ಗೆ ಟೀಕಿಸಲಿ.ಅದು ಬೇರೆ ಮಾತು.ಆದರೆ ಆಡಳಿತ ಕೇಂದ್ರ ಜನರ ಪಾಲಿಗೆ ದೇಗುಲವಾಗಲಿ ಎಂದು ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರ ಆದರ್ಶಕ್ಕೆ ಯಡಿಯೂರಪ್ಪ ಕಪ್ಪು ಚುಕ್ಕೆಯಾಗದಿರಲಿ.ಕನಿಷ್ಟ ಪಕ್ಷ ತಿಂಗಳಿಗೊಮ್ಮೆಯಾದರೂ ವಿಧಾನಸೌಧದ ತಮ್ಮ ಕಛೇರಿಗೆ ಬಂದು ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡಲಿ ಎಂಬುದು ಖುದ್ದು ಬಿಜೆಪಿ ಪ್ರಮುಖರನೇಕರ ಅಭಿಪ್ರಾಯ.

Facebook Comments